ಪಾಟ್ನಾ(ಬಿಹಾರ): ರೈಲ್ವೆ ನೇಮಕಾತಿ ಮಂಡಳಿ ನಡೆಸಿದ ಎನ್ಟಿಪಿಸಿ ಸಿಬಿಟಿ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಪರೀಕ್ಷಾರ್ಥಿಗಳು ನಡೆಸಿದ ಪ್ರತಿಭಟನೆ ಈಗಾಗಲೇ ತೀವ್ರ ಸ್ವರೂಪ ತಳೆದಿದೆ. ವಿದ್ಯಾರ್ಥಿಗಳ ಪರವಾಗಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಮತ್ತು ಇತರ ಯುವ ಸಂಘಟನೆಗಳು ಇಂದು ಬಿಹಾರ ರಾಜ್ಯ ಬಂದ್‌ಗೆ ಕರೆ ನೀಡಿದೆ.
ಬಂದ್‌ಗೆ ಹಲವು ರಾಜಕೀಯ ಪಕ್ಷಗಳ ಬೆಂಬಲವೂ ಇದೆ. ಬಿಹಾರ ಮಹಾಘಟಬಂಧನ್ ಎಲ್ಲ ಪಕ್ಷಗಳು ಮತ್ತು ಜನ್ ಅಧಿಕಾರ್ ಪಕ್ಷ ಮತ್ತು ವಿದ್ಯಾರ್ಥಿ ಸಂಘಟನೆಯಾದ ಇಂಕ್ವಿಲಾಬಿ ನೌಜವಾನ್ ಸಭಾ ಕೂಡಾ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷಾ ನೀತಿ ಮಾತ್ರವಲ್ಲದೇ, ಪರೀಕ್ಷಾ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ ಪರೀಕ್ಷಾರ್ಥಿಗಳ ಮೇಲೆ ಲಾಠಿ ಚಾರ್ಜ್, ದೂರುಗಳು ಮತ್ತು ಬಂಧನವನ್ನು ಖಂಡಿಸಿ, ಇಂದು ಬಿಹಾರ ಬಂದ್‌ಗೆ ಕರೆ ನೀಡಲಾಗಿದೆ.
ಪರೀಕ್ಷಾರ್ಥಿಗಳ ವಿರುದ್ಧ ಸರ್ಕಾರ ಅನುಸರಿಸುತ್ತಿರುವ ಧೋರಣೆ ಖಂಡಿಸಿ, ಹಲವು ಪಕ್ಷಗಳು ಗುರುವಾರ ಸುದ್ದಿಗೋಷ್ಠಿ ನಡೆಸಿದ್ದವು. ಈ ವೇಳೆ, ಮಾತನಾಡಿದ ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಬಿಹಾರ್ ಬಂದ್ ಬೆಂಬಲ ಘೋಷಿಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಆರ್‌ಜೆಡಿ, ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐ(ಎಂ) ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿದೆ. ಅತಿ ಹೆಚ್ಚು ನಿರುದ್ಯೋಗ ದರವೂ ಇಲ್ಲಿದೆ. ಕೇಂದ್ರ ಹಾಗೂ ಬಿಹಾರ ಸರ್ಕಾರಗಳಿಂದ ಇಲ್ಲಿನ ಯವಜನತೆ ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ವಿರೋಧಿಸಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ಮೇಲೆ ನಿತೀಶ್ ಸರ್ಕಾರ ಲಾಠಿ ಚಾರ್ಜ್ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.