ಪಾಟ್ನಾ: ಗುತ್ತಿಗೆ ಆಧಾರದ ಮೇಲೆ ಸೇನೆಯಲ್ಲಿ ಮರುಸೇರ್ಪಡೆ ತರುವ ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕೆಂಬ ಬೇಡಿಕೆಯ ಮೇರೆಗೆ ಇಂದು ಬಿಹಾರದಲ್ಲಿ ಅಗ್ನಿವೀರರು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಬಿಹಾರದ ವಿದ್ಯಾರ್ಥಿ-ಯುವ ಸಂಘಟನೆ AISA-INOS, ರೋಜ್‌ಗರ್ ಸಂಘರ್ಷ್ ಯುನೈಟೆಡ್ ಫ್ರಂಟ್ ಮತ್ತು ಸೇನಾ ನೇಮಕಾತಿ ಜವಾನ್ ಮೋರ್ಚಾ ಈ ಬಂದ್‌ಗೆ ಕರೆ ನೀಡಿವೆ. ಯೋಜನೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಈ ಬಂದ್‌ಗೆ ಆರ್‌ಜೆಡಿ, ಮಹಾಘಟಬಂಧನ್ ಜೊತೆಗೆ ವಿಐಪಿಗಳೂ ಬೆಂಬಲ ನೀಡಿದ್ದಾರೆ.
ಶನಿವಾರವೂ ಮುಂದುವರಿದ ಹಿಂಸಾಚಾರ:ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಭಾರಿ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಹಾರ ಬಂದ್‌ಗೆ ಕರೆ ನೀಡಲಾಗಿದೆ. ಪ್ರತಿಭಟನಾಕಾರರು ಇಂದು ಜೆಹಾನಾಬಾದ್‌ನಲ್ಲಿ ಬಸ್, ಟ್ರಕ್ ಮತ್ತು ಇತರ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪಾಟ್ನಾ-ಗಯಾ ಹೆದ್ದಾರಿಯ ತೆಹ್ತಾ ಪೊಲೀಸ್ ಹೊರಠಾಣೆ ಬಳಿ ಈ ಘಟನೆ ನಡೆದಿದೆ.
72 ಗಂಟೆಗಳ ಕಾಲಾವಕಾಶ: ಸಂಘಟನೆಯ ಮುಖಂಡರು ಮಾತನಾಡಿ, ಸರ್ಕಾರವು ಈ ಯೋಜನೆಯನ್ನು ವಾಪಸ್ ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ, ಅದಕ್ಕಿಂತ ಹೆಚ್ಚು ನಮ್ಮ ಪ್ರತಿಭಟನೆಯ ಕಾವು ಉಲ್ಬಣವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ. ಮೋದಿ ಸರಕಾರಕ್ಕೆ 72 ಗಂಟೆ ಕಾಲಾವಕಾಶ ನೀಡುತ್ತಿದ್ದೇವೆ. ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡಿ ಯುವಕರನ್ನು ಗೇಲಿ ಮಾಡುವ ಈ ಯೋಜನೆಯನ್ನು ಸರಕಾರ ಹಿಂಪಡೆಯದಿದ್ದರೆ ಇಂದು ಬಿಹಾರ ಬಂದ್ ನಂತರ ಭಾರತ್ ಬಂದ್‌ಗೆ ಕರೆ ಕೋಡ್ತಿವಿ ಎಂದು ಹೇಳಿದರು.
ಲಾಲು ವಾಗ್ದಾಳಿ: ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಕೇಂದ್ರ ಸರ್ಕಾರವು ತಕ್ಷಣವೇ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು. ಬಿಜೆಪಿ ಸರಕಾರದ ಬಂಡವಾಳಶಾಹಿ ಮತ್ತು ಯುವ ವಿರೋಧಿ ನೀತಿಗಳಿಂದ ನಿರುದ್ಯೋಗ ಹೆಚ್ಚಿದೆ. ಗುತ್ತಿಗೆ ಆಧಾರದ ಮೇಲೆ ಸೇನೆಯ ಕೆಲಸವನ್ನೂ ನೀಡುತ್ತಿರುವ ಈ ಸರ್ಕಾರ ಗುತ್ತಿಗೆದಾರರಿಂದ ಆಯ್ಕೆಯಾಗಿದೇಯಾ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಓದಿ:ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಕೇಂದ್ರದ 'ಅಗ್ನಿಪಥ್ ಯೋಜನೆ': ಇಲ್ಲಿಯವರೆಗಿನ 9 ಬೆಳವಣಿಗೆಗಳು..
ತೇಜಸ್ವಿ ಯಾದವ್ ಹೇಳಿದ್ದೇನು? : ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಅಗ್ನಿಪಥ್ ಯೋಜನೆಯಡಿಯಲ್ಲಿ ಮರುಸ್ಥಾಪಿಸಲಾದ ಅಗ್ನಿವೀರರ ರಜೆ ಬಗ್ಗೆ ಪ್ರಶ್ನೆ ಎತ್ತಿದ್ದರು. 'ಸಾಮಾನ್ಯ ಸೈನಿಕರಂತೆ ಈ ಜನರಿಗೆ 90 ದಿನಗಳ ರಜೆ ಸಿಗುತ್ತದೆಯೇ, ಅಗ್ನಿಪಥ ಯೋಜನೆಯು ಸಮರ್ಥನೀಯವಾಗಿದ್ದರೆ ಅದರಲ್ಲಿ ಗುತ್ತಿಗೆ ಅಧಿಕಾರಿಗಳನ್ನು ಏಕೆ ನೇಮಿಸಬಾರದು, ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ಏಕೆ ನೇಮಕ ಮಾಡಿಕೊಳ್ಳಬೇಕು, ವಿದ್ಯಾವಂತ ಯುವಕರಿಗೆ ಇದು MGNREGA? ಅಂತಾ ಹಲವಾರು ಪ್ರಶ್ನೆಗಳನ್ನು ಟ್ವೀಟ್ ಮಾಡುವ ಮೂಲಕ ಕೇಳಿದರು.
ಯುವಕರಲ್ಲಿ ಆಕ್ರೋಶ ಎಂದ ಮುಖೇಶ್ ಸಾಹ್ನಿ: ಸೇನಾ ನೇಮಕಾತಿಗೆ ಹೊಸ ಯೋಜನೆಯಾದ ಅಗ್ನಿಪಥ್ ಬಗ್ಗೆ ಯುವಕರಲ್ಲಿ ಆಕ್ರೋಶ ಮೂಡಿದೆ. ದೇಶಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊತ್ತ ಸಾವಿರಾರೂ ಯುವಕರು ಇಂದು ರಸ್ತೆಗಿಳಿದಿದ್ದಾರೆ. ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಇನ್ನೂ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿಲ್ಲ. ಸರ್ಕಾರದ ಹಠಮಾರಿ ಧೋರಣೆ ವಿರೋಧಿಸಿ ಶನಿವಾರ ಬಿಹಾರ ವಿಐಪಿ ಬಂದ್‌ಗೆ ನೈತಿಕ ಬೆಂಬಲ ನೀಡಲಾಗುವುದು ಎಂದು ವಿಐಪಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಚಿವ ಮುಖೇಶ್ ಸಾಹ್ನಿ ಹೇಳಿದರು.
ದೇಶದ ಯುವಕರೊಂದಿಗೆ ನಾನಿದ್ದೇವೆ- ಮಾಂಝಿ: ಹಮ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿ, ದೇಶದ ಯುವಕರ ಜೊತೆ ನಾವಿದ್ದೇವೆ. ನಾವು ಯಾವುದೇ ರೀತಿಯ ಹಿಂಸೆಯ ಪರವಾಗಿಲ್ಲ. ದೇಶದ ಯುವಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇವೆ. ಯುವಕರು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಯುವಕರು ಕರೆ ನೀಡಿರುವ ‘ಬಿಹಾರ ಬಂದ್’ಗೆ ನಮ್ಮ ಪಕ್ಷ ತಾತ್ವಿಕವಾಗಿ ಬೆಂಬಲ ನೀಡುತ್ತದೆ ಎಂದರು.
ಬಂದ್‌ಗೆ ಆರ್‌ಜೆಡಿ ಬೆಂಬಲ: ಅಗ್ನಿಪಥ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಕಳೆದ ಮೂರು ದಿನಗಳಲ್ಲಿ ಬಿಹಾರದ ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಜನರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಗ್ನಿಪಥಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಗಲಾಟೆ ನಡೆಯುತ್ತಿದೆ. ಬಿಹಾರ ಬಂದ್‌ಗೆ ಆರ್‌ಜೆಡಿ ನೈತಿಕ ಬೆಂಬಲ ನೀಡುತ್ತದೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಹೇಳಿದರು.
ಓದಿ:ದೇಶದ ಹಲವೆಡೆ ಭುಗಿಲೆದ್ದ ಆಕ್ರೋಶ... ಟ್ರೈನ್ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!
ಹೋರಾಟಕ್ಕೆ ಬಿಹಾರ ತತ್ತರ:ಶುಕ್ರವಾರ ನಡೆದ ಉಗ್ರ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಇಡೀ ಬಿಹಾರದಲ್ಲಿ ದಾಂಧಲೆ ನಡೆಸಿದ್ದಾರೆ. ಪಾಟ್ನಾದ ದಾನಪುರ ನಿಲ್ದಾಣದಲ್ಲಿ ರೈಲುಗಳನ್ನು ಧ್ವಂಸಗೊಳಿಸಿದ್ದಾರೆ. ಡಣಾಪುರ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹಚ್ಚಲಾಗಿದೆ. ಅದೇ ಸಮಯದಲ್ಲಿ ಪ್ರತಿಭಟನಾಕಾರರು ಲಖಿಸರಾಯ್‌ನಲ್ಲಿ ವಿಕ್ರಮಶಿಲಾ ಎಕ್ಸ್‌ಪ್ರೆಸ್ ಮತ್ತು ಜನಸೇವಾ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಿದ್ದರು. ಈ ವೇಳೆ, ಲೂಟಿ ಕೂಡ ನಡೆದಿದ್ದು, ಪ್ರಯಾಣಿಕರಿಗೂ ಥಳಿಸಿದ್ದಾರೆ. ಬೋಗಿಗಳಿಗೆ ಬೆಂಕಿ ಹಚ್ಚಿದ ನಂತರ ಕೆಲ ದುಷ್ಕರ್ಮಿಗಳು ಗಲಾಟೆ ಮಾಡಿ ಕಿಯುಲ್ ಗಯಾ ಪ್ಯಾಸೆಂಜರ್ನಲ್ಲೇ ಕುಳಿತು ಪರಾರಿಯಾಗಿದ್ದಾರೆ.
ಪೊಲೀಸ್ ಅಲರ್ಟ್:ಮೂರು ದಿನಗಳಲ್ಲಿ ಇಡೀ ರಾಜ್ಯದಲ್ಲಿ ಸಾಕಷ್ಟು ಕೋಲಾಹಲ ಉಂಟಾಗಿದ್ದು, ಬಿಹಾರ ಬಂದ್ ಹಿನ್ನೆಲೆ ಎಲ್ಲಾ ಎಸ್‌ಡಿಒಗಳು ಮತ್ತು ಎಸ್‌ಡಿಪಿಒಗಳು ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಕೇಂದ್ರ ಕಚೇರಿ ಹೇಳಿದೆ. ಇಂದಿನ ಬಂದ್ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜಧಾನಿ ಪಾಟ್ನಾ ಸೇರಿದಂತೆ ಇಡೀ ಬಿಹಾರದ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಜಾಗರೂಕರಾಗಿರಲು ತಿಳಿಸಲಾಗಿದೆ. ರಾಜಧಾನಿ ಪಾಟ್ನಾ ಸೇರಿದಂತೆ ಬಿಹಾರದ ಕೆಲವು ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ಹಾಗೂ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಬಿಹಾರ ಪೊಲೀಸ್ ಪ್ರಧಾನ ಕಚೇರಿ ತಿಳಿಸಿದೆ.