ನಳಂದ (ಬಿಹಾರ) : ಆಟವಾಡುತ್ತ ತೆರೆದ ಕೊಳವೆಬಾವಿಯಲ್ಲಿ ಬಿದ್ದಿದ್ದ 3 ವರ್ಷದ ಮಗುವನ್ನು ಸತತ 5 ತಾಸುಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಮಗು ಸದ್ಯ ಆರೋಗ್ಯವಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. "ಮಗುವನ್ನು ರಕ್ಷಿಸಲಾಗಿದ್ದು, ಮಗು ಆರೋಗ್ಯವಾಗಿದೆ. ಮಗುವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದೇವೆ" ಎಂದು ಬಿಹಾರ ನಳಂದದ ಎನ್‌ಡಿಆರ್‌ಎಫ್ ಅಧಿಕಾರಿ ರಂಜೀತ್ ಕುಮಾರ್ ಮಾಹಿತಿ ನೀಡಿದರು.
ಘಟನೆಯ ಹಿನ್ನೆಲೆ: 3 ವರ್ಷದ ಮಗುವೊಂದು 40 ಅಡಿ ಆಳದ ಕೊಳವೆಬಾವಿಯೊಳಗೆ ಆಟವಾಡುತ್ತ ಕೊಳವೆ ಬಾವಿಯೊಳಗೆ ಬಿದ್ದಿರುವ ದಾರುಣ ಘಟನೆ ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ ನಡೆದಿತ್ತು. ಮಗುವಿನ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಬಾವಿಗೆ ಬಿದ್ದ ಮಗುವಿನ ಹೆಸರು ಶಿವಂ ಕುಮಾರ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರೊಬ್ಬರು ಬೋರ್ ವೆಲ್ ಕೊರೆಸಿ ಅದಕ್ಕೆ ಮುಚ್ಚಳ ಹಾಕದ ಕಾರಣದಿಂದ ಈ ದುರಂತ ಸಂಭವಿಸಿದೆ. ಶಿವಂ ಜೊತೆ ಆಟವಾಡುತ್ತಿದ್ದ ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ನಳಂದ ನಗರ ಪಂಚಾಯತ್ ನಳಂದ ಉಪಾಧ್ಯಕ್ಷ ನಳಿನ್ ಮೌರ್ಯ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮೌರ್ಯ, ರೈತರೊಬ್ಬರು ಈ ಬೋರ್‌ವೆಲ್ ಅನ್ನು ಕೊರೆಸಿದ್ದಾರೆ. ಆದರೆ ಈ ಬೋರ್‌ವೆಲ್‌ನಲ್ಲಿ ನೀರು ಬಂದಿರಲಿಲ್ಲ. ಹೀಗಾಗಿ ಅವರು ಬೇರೆ ಕಡೆ ಬೋರ್‌ವೆಲ್ ಕೊರೆಸಿದರು. ಆದರೆ ಇದನ್ನು ಮುಚ್ಚದೆ ಹಾಗೆಯೇ ಬಿಟ್ಟರು ಎಂದು ಹೇಳಿದರು.
ಮಗು ಇನ್ನೂ ಜೀವಂತವಾಗಿದ್ದು, ಅದರ ಧ್ವನಿ ಈಗಲೂ ಕೇಳಿಸುತ್ತಿದೆ ಎಂದು ಸರ್ಕಲ್ ಪೊಲೀಸ್ ಆಫೀಸರ್ ಶಂಭು ಮಂಡಲ್ ಹೇಳಿದರು. ಮಗುವೊಂದು ಬೋರ್‌ವೆಲ್‌ಗೆ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಗುವನ್ನು ರಕ್ಷಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಮಗು ಇನ್ನೂ ಜೀವಂತವಾಗಿದೆ, ಅವರ ಧ್ವನಿ ನಮಗೆ ಕೇಳಿಸುತ್ತಿದೆ ಎಂದು ಅವರು ಕಾರ್ಯಾಚರಣೆ ಸಮಯದಲ್ಲಿ ಹೇಳಿದ್ದರು.