ಲಖನೌ(ಉತ್ತರಪ್ರದೇಶ):ಸಮಾಜವಾದಿ ಪಕ್ಷ ಮತ್ತು ಅದರ ನಾಯಕ ಅಖಿಲೇಶ್ ಯಾದವ್ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯು ಭಾರಿ ಸವಾಲಾಗಿ ಪರಿಣಮಿಸಲಿದೆ ಎನ್ನಲಾಗಿದೆ. ಕಾರಣ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಅನುಪಸ್ಥಿತಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚುನಾವಣೆ ಭರದ ಸಿದ್ಧತೆಯಲ್ಲಿರುವ ಅಖಿಲೇಶ್ ಯಾದವ್ ಏಕಾಂಗಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಚುನಾವಣಾ ಪ್ರಚಾರದಲ್ಲಿ ಅನಾರೋಗ್ಯದ ಕಾರಣ ಭಾಗಿಯಾಗುತ್ತಿಲ್ಲ. ಅಲ್ಲದೇ, ಪಕ್ಷದ ಹಿರಿಯರು ನಾಯಕರೂ ಕೂಡ ಸಕ್ರಿಯ ರಾಜಕಾರಣದಿಂದ ತೆರೆಮರೆಗೆ ಸರಿದಿದ್ದಾರೆ. ಇದು ಅಖಿಲೇಶ್ ಯಾದವ್ ಅವರನ್ನು ಚಿಂತೆಗೀಡು ಮಾಡಿದೆ.
2012 ರಲ್ಲಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಅದಕ್ಕೆ ಮೂಲ ಕಾರಣವಾಗಿದ್ದು, ಮುಲಾಯಂ ಸಿಂಗ್ ಅವರ ಚಾಣಾಕ್ಷತನ. ಅವರು ರೂಪಿಸಿದ ತಂತ್ರಗಳು ಯಶಸ್ವಿಯಾಗಿ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ಮುಲಾಯಂ ಅವರು ವಯೋಸಹಜ ಅನಾರೋಗ್ಯದಿಂದ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವಂತಾಗಿದೆ.
ಇನ್ನು ಪಕ್ಷದ ಚುಕ್ಕಾಣಿ ಹಿಡಿದಿರುವ ಅಖಿಲೇಶ್ ಯಾದವ್ ಸ್ಟಾರ್ ಪ್ರಚಾರಕರಾಗಿದ್ದಾರೆ. ಇದು ಅವರ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದೆ. ಅಲ್ಲದೇ ಅಖಿಲೇಶ್ ಯಾದವ್ 2017 ರಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಸಲಿಲ್ಲ. ಇದಲ್ಲದೇ ಅವರ ಸಹೋದರರೂ ಕೂಡ ರಾಜಕೀಯ ಶಕ್ತಿಯನ್ನು ಬೆಳೆಸಿಕೊಳ್ಳುವಲ್ಲಿ ವಿಫಲರಾಗಿದ್ದು, ಅಖಿಲೇಶ್ ಏಕಶಕ್ತಿಯಾಗಿ ಹೋರಾಡಬೇಕಿದೆ.