ನವದೆಹಲಿ/ಗಾಜಿಯಾಬಾದ್: ಇಲ್ಲಿನ ಹಿಂಡನ್ ವಾಯುನೆಲೆ ಮತ್ತು ವಿಮಾನ ನಿಲ್ದಾಣದಲ್ಲಿ ಕಿಡಿಗೇಡಿಗಳು ಸುರಂಗ ಕೊರೆಯಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ ಆಗಿರುವುದು ಕಂಡು ಬಂದಿದೆ. ಪೊಲೀಸರು ಅನುಮಾನಾಸ್ಪದ ಗುಂಡಿಯೊಂದನ್ನು ಪತ್ತೆ ಮಾಡಿದ್ದಾರೆ. ಅದನ್ನು ವಾಯುಪಡೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಸುಮಾರು 4 ಅಡಿ ಆಳದ ಗುಂಡಿಯ ಮೂಲಕ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಹಿಂಡನ್ ವಿಮಾನ ನಿಲ್ದಾಣದ ಗಡಿ ಗೋಡೆಯ ಕೆಳಭಾಗದಲ್ಲಿ 4 ಅಡಿ ಆಳದ ಗುಂಡಿ ಪತ್ತೆಯಾಗಿದೆ, ಇದು ಸುರಂಗದಂತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಗುಂಡಿ ಮುಚ್ಚುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ವಾಯುಪಡೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಡಿಸಿಪಿ ಶುಭಂ ಪಟೇಲ್ ಮಾತನಾಡಿ, "ಹಿಂಡನ್ ವಿಮಾನ ನಿಲ್ದಾಣದ ಹೊರ ಗೋಡೆಯ ಬಳಿ ಇಕ್ಬಾಲ್ ಕಾಲೋನಿ ಇದೆ. ಅಲ್ಲಿನ ಗಡಿಗೋಡೆಯ ಬಳಿ ಕಿಡಿಗೇಡಿಗಳು ಗುಂಡಿ ತೋಡಿರುವ ಮಾಹಿತಿ ಸಿಕ್ಕಿದೆ" ಎಂದು ತಿಳಿಸಿದ್ದಾರೆ.
ಹಿಂಡನ್ ವಿಮಾನ ನಿಲ್ದಾಣ ಮತ್ತು ವಾಯುನೆಲೆ ಸುತ್ತಲೂ ಕಟ್ಟುನಿಟ್ಟಿನ ಭದ್ರತೆ ಇರುತ್ತದೆ. ಹಿಂಡನ್ ವಾಯುನೆಲೆಯ ಗೋಡೆಗಳ ಸುತ್ತಲೂ ಒಳನುಗ್ಗಲು ಯತ್ನಿಸುವವರನ್ನು ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಬರೆಯಲಾಗಿದೆ. ಆದರೂ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಪ್ರವೇಶಿಸಲು ಈ ಸುರಂಗ ಮಾರ್ಗ ನಿರ್ಮಿಸಲು ಯಾರು ಪ್ರಯತ್ನಿಸಿದ್ದಾರೆ ಎಂಬ ಪ್ರಶ್ನೆ ಈಗ ಮೂಡಿದೆ. ಘಟನೆ ಸಂಬಂಧ ಸ್ಥಳೀಯರನ್ನು ವಿಚಾರಿಸಲಾಗುತ್ತಿದೆ. ಇದಲ್ಲದೆ, ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಸುರಂಗ ನಿರ್ಮಾಣಕ್ಕೆ ಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಸಿಕ್ಕಿಬಿದ್ದ ನಂತರವೇ ಸತ್ಯಾಸತ್ಯತೆ ತಿಳಿದು ಬರಲಿದೆ.
ಈ ಹಿಂದೆಯೂ ಹಲವು ಬಾರಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದರು. ಆದರೆ, ಸುರಂಗದ ಮೂಲಕ ಒಳಗೆ ಪ್ರವೇಶಿಸಲು ಪ್ರಯತ್ನ ನಡೆಸಿರುವುದು ಇದೇ ಮೊದಲ ಬಾರಿ ಆಗಿದೆ.
ವಾಯುಪಡೆ ಹೆಲಿಕಾಪ್ಟರ್ ಪತನ, ಇಬ್ಬರು ಸಾವು(ತೆಲಂಗಾಣ):ಇತ್ತೀಚೆಗೆ, ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವಾಯುಪಡೆಗೆ ಸೇರಿದ ತರಬೇತಿ ಹೆಲಿಕಾಪ್ಟರ್ ಪತನಗೊಂಡಿತ್ತು. ಹೈದರಾಬಾದ್‌ನ ದುಂಡಿಗಲ್‌ನಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್, ತಾಂತ್ರಿಕ ದೋಷದಿಂದ ತುಪ್ರಾನ್ ಪುರಸಭೆ ವ್ಯಾಪ್ತಿಯ ರಾವೆಲ್ಲಿ ಉಪನಗರದಲ್ಲಿ ಧರೆಗಪ್ಪಳಿಸಿತ್ತು. ಪರಿಣಾಮ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಹೆಲಿಕಾಪ್ಟರ್ನಲ್ಲಿ ಓರ್ವ ತರಬೇತುದಾರ, ಮತ್ತೊಬ್ಬ ಟ್ರೈನಿ ಪೈಲಟ್ ಇದ್ದರು.
ಇದನ್ನೂ ಓದಿ:ಹಳಿ ತಪ್ಪಿದ ಗೂಡ್ಸ್ ರೈಲು: ರೈಲು ಸಂಚಾರದಲ್ಲಿ ವ್ಯತ್ಯಯ