ಹೈದರಾಬಾದ್: ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ಸೆಟ್ನಲ್ಲಿ ಬಿಗ್ ಬಿ ಗಾಯಗೊಂಡಿದ್ದು ಕೂಡಲೇ ಅವರನ್ನು ಗಚ್ಚಿಬೌಲಿಯ AIG ಆಸ್ಪತ್ರೆಗೆ ಕರೆದೊಯ್ದು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಈ ಬಗ್ಗೆ ಅಮಿತಾಬ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಹೈದರಾಬಾದ್ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದ ಆ್ಯಕ್ಷನ್ ಸೀನ್ ಸಮಯದಲ್ಲಿ ಗಾಯಗೊಂಡೆ. ಸಿಟಿ ಸ್ಕ್ಯಾನ್ ಮಾಡಲಾಗಿದೆ. ಪಕ್ಕೆಲುಬಿನ ಕಾರ್ಟಿಲೆಜ್ ಮುರಿದು ಬಲಭಾಗಕ್ಕೆ ಸರಿದಿದೆ. ವೈದ್ಯರು ಪರಿಶೀಲಿಸಿ ನೋವಿಗೆ ಔಷಧ ನೀಡಿದ್ದಾರೆ. ನಾನು ಸದ್ಯ ಮನೆಗೆ ಮರಳಿದ್ದೇನೆ. ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ನಡೆದಾಡಲು ಮತ್ತು ಉಸಿರಾಟಕ್ಕೆ ಕೊಂಚ ತೊಂದರೆ ಉಂಟಾಗುತ್ತಿದೆ. ಗಾಯದಿಂದ ಚೇತರಿಸಿಕೊಳ್ಳುವವರೆಗೆ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸದ್ಯ ಬಚ್ಚನ್ ತಮ್ಮ ಮುಂಬೈ ನಿವಾಸಕ್ಕೆ ಹಿಂತಿರುಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಕ್ರೀನ್ ಐಕಾನ್ ಹೇಳಿದೆ. ಅಭಿಮಾನಿಗಳಿಗೆ ಈ ವಾರ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲು ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
40 ವರ್ಷಗಳ ಹಿಂದಿನ ಆ ಘಟನೆ!: ಜುಲೈ 26, 1982 ರಂದು ಕೂಲಿ ಚಿತ್ರೀಕರಣ ವೇಳೆಯೂ ಅಮಿತಾಬ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯದ ತೀವ್ರತೆ ಎಷ್ಟಿತ್ತೆಂದರೆ ಬದುಕುಳಿಯುವುದೇ ಅನುಮಾನ ಎಂದು ಹೇಳಲಾಗಿತ್ತು. ಅದೃಷ್ಟವಶಾತ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸೇರಿ ಸೂಕ್ತ ಚಿಕಿತ್ಸೆಯೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದಕ್ಕೂ ಮುನ್ನ ಆಸ್ಪತ್ರೆಗೆ ದಾಖಲಿಸಿದ 5 ದಿನಗಳಲ್ಲಿ ಅವರಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಬಳಿಕ ದೀರ್ಘಕಾಲದವರೆಗೆ ಸಿನಿಮಾದಿಂದ ದೂರವೇ ಉಳಿದಿದ್ದರು. ಜನವರಿ 7 1983ಕ್ಕೆ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿದ್ದರು. ಆಗಸ್ಟ್ 2 ಅನ್ನು ಬಿಗ್ ಬಿ ಅಭಿಮಾನಿಗಳು ಎರಡನೇ ಹುಟ್ಟುಹಬ್ಬವೆಂದೇ ಆಚರಿಸಲು ಪ್ರಾರಂಭಿಸಿದರು. ಏಕಂದರೆ, ಈ ದಿನ ಅಮಿತಾಬ್ ಬಚ್ಚನ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದರು.
ಇದೀಗ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಮೂರನೇ ಮಹಾಯುದ್ಧದ ಕಾಲ್ಪನಿಕ ಕಥೆ ಆಧಾರಿತ ಚಿತ್ರ ಇದಾಗಿದೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ. 2024ರ ಜನವರಿ 12ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದೆ. ಆದರೆ, ಬಿಗ್ ಬಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರ ಪಾತ್ರದ ಚಿತ್ರೀಕರಣ ಮುಂದೂಡಲಾಗಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ಪೋಸ್ಟ್ ಪೋನ್ ಆಗುವ ಸಾಧ್ಯತೆ ಗೋಚರಿಸಿದೆ. 'ಸೆಕ್ಷನ್ 84' ಮತ್ತು ಹಾಲಿವುಡ್ ಚಿತ್ರವಾದ 'ದಿ ಇಂಟರ್ನ್' ಹಿಂದಿಗೆ ರಿಮೇಕ್ ಮಾಡಲಾಗುತ್ತಿದ್ದು ಅದರಲ್ಲೂ ಬಚ್ಚನ್ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ:8 ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ: ಖುಷ್ಬೂ ಸುಂದರ್