ಗಾಂಧಿನಗರ(ಗುಜರಾತ್):ವಿಜಯ್ ರೂಪಾನಿ ಹಠಾತ್ ರಾಜೀನಾಮೆಯಿಂದ ತೆರವಾಗಿದ್ದ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸದಾಗಿ ಆಯ್ಕೆಯಾಗಿದ್ದ ಶಾಸಕ ಭೂಪೇಂದ್ರ ಪಟೇಲ್ ಪದಗ್ರಹಣ ಮಾಡಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 59 ವರ್ಷದ ಪಟೇಲ್ 17ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ನೂತನ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಮೋದಿ ಅಭಿನಂದನೆ:
'ಅಭಿನಂದನೆಗಳು, ನಾನು ಭೂಪೇಂದ್ರ ಪಟೇಲ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅದು ಬಿಜೆಪಿ ಪಕ್ಷ ಸಂಘಟನೆಯೇ ಇರಲಿ ಅಥವಾ ನಗರ ಸ್ಥಳೀಯ ಆಡಳಿತವೇ ಇರಲಿ, ಸಾಮುದಾಯಿಕ ಸೇವೆಗಳೇ ಇರಲಿ ಪಟೇಲ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಗುಜರಾತ್ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಪ್ರತಿಜ್ಞಾವಿಧಿ ಬೋಧಿಸಿದ್ದು, ಪಟೇಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಜೊತೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಬಲ ಪಟೇಲ್ ಸಮುದಾಯಕ್ಕೆ ಸೇರಿರುವ 59 ವರ್ಷದ ಭೂಪೇಂದ್ರ ಒಮ್ಮೆಯೂ ಮಂತ್ರಿಯಾಗಿ ಕಾರ್ಯನಿರ್ವಹಿಸಿಲ್ಲ. 2017ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಇವರು ಹಿಂದಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಕಳೆದ ಎರಡು ದಿನಗಳ ಹಿಂದೆ ಸಿಎಂ ಸ್ಥಾನಕ್ಕೆ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ನಡೆದ ಶಾಸಕಾಂಗ ಸಭೆಯಲ್ಲಿ ಭೂಪೇಂದ್ರ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಇಂದು ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುಂದಿನ ಎರಡು ದಿನದಲ್ಲಿ ನೂತನ ಸಚಿವ ಸಂಪುಟ ಪುರನ್ರಚನೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಗುಜರಾತ್ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭೂಪೇಂದ್ರ ಪಟೇಲ್
ಗುಜರಾತ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ:
ಗುಜರಾತ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಈ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಳೆದ 5 ವರ್ಷಗಳಿಂದ ರಾಜ್ಯದ ಸಿಎಂ ಆಗಿದ್ದ ವಿಜಯ್ ರೂಪಾನಿ ಬಗ್ಗೆ ಸ್ವಪಕ್ಷದಿಂದಲೇ ಅಪಸ್ವರ ಕೇಳಿ ಬಂದಿತ್ತು. ಹೀಗಾಗಿ ಅವರ ಸ್ಥಾನಕ್ಕೆ ಬೇರೆ ಅಭ್ಯರ್ಥಿ ನೇಮಕ ಮಾಡಲಾಗಿದೆ.