ಗಾಂಧಿನಗರ (ಗುಜರಾತ್):ಗುಜರಾತ್ನಲ್ಲಿ ಎಲ್ಲ ಪಕ್ಷಗಳನ್ನು ಧೂಳೀಪಟ ಮಾಡಿ ದಾಖಲೆಯ 7ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ, ಅದರ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಅವರು 2 ನೇ ಬಾರಿಗೆ ಸಿಎಂ ಆಗಿ ಮುಂದುವರಿಯಲಿದ್ದಾರೆ.
ಇಂದು ಗುಜರಾತ್ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್, ಬಿ ಎಸ್ ಯಡಿಯೂರಪ್ಪ ಮತ್ತು ಅರ್ಜುನ್ ಮುಂಡಾ ಅವರ ನೇತೃತ್ವದಲ್ಲಿ ಭೂಪೇಂದ್ರ ಪಟೇಲ್ರನ್ನು ಆರಿಸಲಾಯಿತು. 60ರ ಹರೆಯದ ಭೂಪೇಂದ್ರ ಪಟೇಲ್ ಅವರು ತಮ್ಮ ಸಂಪುಟ ಸಮೇತ ನಿನ್ನೆ(ಶುಕ್ರವಾರ) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 12 ರಂದು 2 ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ಭೂಪೇಂದ್ರ ಪಟೇಲ್, 1.92 ಲಕ್ಷ ಮತಗಳಿಂದ ಈ ಬಾರಿ ಗೆಲುವು ಸಾಧಿಸಿದ್ದರು. ಪಕ್ಷ ಚುನಾವಣೆಗೂ ಪೂರ್ವವೇ ಭೂಪೇಂದ್ರ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿತ್ತು. ಇಂದಿನ ಸಭೆಯಲ್ಲಿ ಔಪಚಾರಿಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.