ಭುವನೇಶ್ವರ (ಒಡಿಶಾ): ಗ್ರಾಹಕರಿಗೆ ವಿದ್ಯುತ್ ಇಲಾಖೆ ಆಗಾಗ ಕರೆಂಟ್ ಬಿಲ್ ಮೂಲಕವೂ ಶಾಕ್ ನೀಡುತ್ತಿರುತ್ತದೆ. ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸದೆ ಇದ್ದರೂ ಲಕ್ಷಾಂತರ ರೂಪಾಯಿ ಕಟ್ಟಬೇಕು ಎಂದು ಬಿಲ್ ಕಳುಹಿಸುವ ಘಟನೆಗಳು ವರದಿಯಾಗುತ್ತಿರುತ್ತವೆ. ಭುವನೇಶ್ವರದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ.
ಭುವನೇಶ್ವರದ ನಿವಾಸಿ ದುರ್ಗಾ ಪ್ರಸಾದ್ ಪಟ್ನಾಯಕ್ ಎಂಬವರಿಗೆ ವಿದ್ಯುತ್ ಇಲಾಖೆ 7.90 ಕೋಟಿ ರೂ. ಮೊತ್ತದ ಕರೆಂಟ್ ಬಿಲ್ ಕಳುಹಿಸಿದೆ. ವಿದ್ಯುತ್ ಬಿಲ್ ನೋಡಿ ಅವರು ಆಘಾತಗೊಂಡಿದ್ದಾರೆ. ದುರ್ಗಾ ಪ್ರಸಾದ್ ಪಟ್ನಾಯಕ್ ಅವರು ಭುವನೇಶ್ವರದ ನೀಲಾದ್ರಿ ವಿಹಾರ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮಾರ್ಚ್‌ನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿದ ಬಳಿಕ ಅವರಿಗೆ 7,90,35,456 ರೂಪಾಯಿ ವಿದ್ಯುತ್ ಬಿಲ್ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಈ ಗ್ರಾಮಸ್ಥರಿಗೆ ವಿದ್ಯುತ್ ಶಾಕ್: ಕರೆಂಟ್ ನೀಡದೇ 50 ಸಾವಿರ ರೂ ಬಿಲ್ ನೀಡಿದ ಇಲಾಖೆ
ಈ ಬಗ್ಗೆ ಮಾತನಾಡಿದ ದುರ್ಗಾ ಪ್ರಸಾದ್ ಪಟ್ನಾಯಕ್, ''ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಮನೆಯ ವಿದ್ಯುತ್ ಬಿಲ್‌ಗಳು 700 ರಿಂದ 1,500 ರೂಪಾಯಿಗಳವರೆಗೆ ಇರುತ್ತದೆ. ಆದರೆ ಸ್ಮಾರ್ಟ್ ಮೀಟರ್ ಅಳವಡಿಕೆಯ ನಂತರ ನಾನು ದೊಡ್ಡ ಮೊತ್ತವನ್ನು ಪಾವತಿಸಿದ್ದೇನೆ. ಏಪ್ರಿಲ್ ತಿಂಗಳಿನಲ್ಲಿ 6 ಸಾವಿರ ರೂ.ಪಾವತಿಸಿದ್ದೇನೆ. ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ಆನ್‌ಲೈನ್‌ನಲ್ಲಿ ಬಿಲ್ ಪಾವತಿಸಲು ಹೋದಾಗ ನಾನು ವಿಚಿತ್ರ ಬಿಲ್ ಅನ್ನು ನೋಡಿದೆ. ಮೇ ತಿಂಗಳ ಬಿಲ್ ನೋಡಿ ನನಗೆ ಆಘಾತವಾಯಿತು. ತಾಂತ್ರಿಕ ದೋಷ ಎಂದು ಶಂಕಿಸಿ ಟಾಟಾ ಪವರ್ ಸೆಂಟ್ರಲ್ ಒಡಿಶಾ ಡಿಸ್ಟ್ರಿಬ್ಯೂಷನ್ ಲಿಮಿಟೆಡ್(TPCODL)ಗೆ ಟ್ವೀಟ್ ಮೂಲಕ ಆನ್‌ಲೈನ್‌ನಲ್ಲಿ ದೂರು ನೀಡಿದ್ದೇನೆ. ಆದರೆ ಈವರೆಗೆ ವಿದ್ಯುತ್ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ" ಎಂದು ದೂರಿದರು.