ಭೋಪಾಲ್ (ಮಧ್ಯಪ್ರದೇಶ): ಎರಡು ದಿನಗಳ ಹಿಂದೆ ಭೋಪಾಲ್ನಲ್ಲಿರುವ ಸಾತ್ಪುರ ಭವನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದ ಘಟನೆ ಸುದ್ದಿಯಾಗಿತ್ತು. ಬೆಂಕಿ ಹತ್ತಿಕೊಂಡ ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನ ಸಮೇತ ಬಂದು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದರು. ಸಾತ್ಪುರ ಭವನ ತೆರೆದ ಕಟ್ಟಡವಾಗಿದ್ದರೂ ಬೆಂಕಿ ನಂದಿಸುವ ಕಾರ್ಯ ದೀರ್ಘ ಸಮಯವನ್ನು ತೆಗೆದುಕೊಂಡಿದ್ದಾದರೂ ಏಕೆ ಎನ್ನುವ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಈ ಬಹುಮಹಡಿ ಕಟ್ಟಡದಲ್ಲಿ ಈ ಮುಂಚೆಯೇ ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಂದಿಸುವ ಉಪಕರಣಗಳನ್ನು ಲಭ್ಯವಾಗಿರಿಸುತ್ತಿದ್ದರೆ ಬೆಂಕಿ ಒಂದು ಮಹಡಿಯಿಂದ ಇತರ ಮಹಡಿಗಳಿಗೆ ಹರಡುವುದನ್ನು ತಡೆಯಬಹುದಿತ್ತು ಎಂದು ಮೂಲಗಳು ಹೇಳುತ್ತಿವೆ. ಇನ್ನೂ ಅನೇಕ ಪ್ರಶ್ನೆಗಳು ಎದ್ದಿದ್ದು, ಎಲ್ಲವೂ ಪ್ರಶ್ನೆಗಳಾಗಿಯೇ ಉಳಿದಿವೆ. ಉತ್ತರ ಇನ್ನೂ ಸಿಕ್ಕಿಲ್ಲ. ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಕೊರತೆಯಿಂದಾಗಿ ಬೆಂಕಿ ನಂದಿಸಲು 20 ಗಂಟೆಗಳಿಗೂ ಹೆಚ್ಚು ಸಮಯ ಹಿಡಿಯಿತು ಎಂದು ಅಗ್ನಿಶಾಮಕ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಕೊಟ್ಟ ಕಾರಣವೇನು?:ಈ ಕಟ್ಟಡದಲ್ಲಿ ಯಾವುದೇ ಅಗ್ನಿ ಸುರಕ್ಷತಾ ಎಚ್ಚರಿಕೆಗಳಿಲ್ಲ, ಮತ್ತು ಅಗ್ನಿಶಾಮಕ ಉಪಕರಣಗಳನ್ನು ಶೋಪೀಸ್‌ಗಳಿಗಾಗಿ ಗೋಡೆಗಳ ಮೇಲೆ ನೇತುಹಾಕಲಾಗಿತ್ತು ಅಷ್ಟೇ. ಕೇವಲ ಒಂದು ಅಥವಾ ಎರಡು ಬೆಂಕಿ ನಂದಿಸುವ ಉಪಕರಣಗಳು ಕಾರ್ಯನಿರ್ವಹಿಸಿದರೆ ಉಳಿದವುಗಳು ಎಲ್ಲವೂ ಕೆಟ್ಟುಹೋಗಿದ್ದವು. ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಅಗ್ನಿಶಾಮಕ ದಳ ನಾಲ್ಕನೇ ಮಹಡಿಗೆ ನೀರಿನ ಪೈಪ್ ತೆಗೆದುಕೊಂಡು ಹೋಗಲು ಸಮಯ ಹಿಡಿಯಿತು.
ಈ ಎಲ್ಲ ಕಾರಣಗಳಿಂದ ಸಾತ್ಪುರ ಭವನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ತಕ್ಷಣಕ್ಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕಳೆದ 19 ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ರಾಜ್ಯದಲ್ಲಿ ಅಗ್ನಿ ಸುರಕ್ಷತಾ ಕಾಯ್ದೆ ಜಾರಿಯಾಗಿಲ್ಲ. ಬಿಲ್ಡರ್‌ಗಳು ಮತ್ತು ಇತರ ದೊಡ್ಡ ಭೂಮಾಫಿಯಾಗಳ ಮುಂದೆ ಸರ್ಕಾರ ತಲೆಬಾಗಿರುವುದು ಒಂದು ಕಾರಣ. ದೇಶದ ಇತರ ರಾಜ್ಯಗಳಲ್ಲಿ ಅಗ್ನಿ ಸುರಕ್ಷತಾ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ, ಆದರೆ ಮಧ್ಯಪ್ರದೇಶದಲ್ಲಿ ಮಾತ್ರ ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರು ಹೇಳುವುದೇನು?:ಬೆಂಕಿ ಹತ್ತಿಕೊಂಡು ಸ್ವಲ್ಪ ಹೊತ್ತಿನಲ್ಲೇ ಸಾತ್ಪುರ ಕಟ್ಟಡದ ಬಳಿ ಬೆಂಕಿ ನಂದಿಸಲು ವಾಯುಪಡೆಯ ವಾಹನವೂ ಬಂದಿತ್ತು. ಆದರೆ, ಅವರಿಗೆ ಸಕಾಲದಲ್ಲಿ ನೀರು ಸಿಗಲಿಲ್ಲ. ಇತರ ಅಗ್ನಿಶಾಮಕ ದಳದವರಿಗೂ ಇದೇ ಸ್ಥಿತಿ ಎದುರಾಗಿತ್ತು. ಅಲ್ಲಿ ಅವರಿಗೆ ನಿರಂತರ ನೀರು ಸರಬರಾಜು ಆಗಿದ್ದರೆ, ಶೀಘ್ರದಲ್ಲೇ ಬೆಂಕಿ ನಿಯಂತ್ರಣ ಸಾಧ್ಯವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.