ಭೋಪಾಲ್,ಮಧ್ಯಪ್ರದೇಶ :ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರಿಗೆ ಮಧ್ಯಪ್ರದೇಶದ ಭೋಪಾಲ್ ಜಿಲ್ಲಾ ನ್ಯಾಯಾಲಯವೊಂದು ಭೂ ವ್ಯವಹಾರದ ವಿಚಾರವಾಗಿ ನೋಟಿಸ್ ಜಾರಿ ಮಾಡಿದೆ. ಭೋಪಾಲ್ ಜಿಲ್ಲಾ ನ್ಯಾಯಾಲಯವು ಏಪ್ರಿಲ್ 7ರಂದು ನೋಟಿಸ್ ಜಾರಿ ಮಾಡಿತ್ತು ಮತ್ತು ಈ ನೋಟಿಸ್ಗೆ ತಕ್ಕ ಉತ್ತರವನ್ನು ಸಲ್ಲಿಸಲು ಏಪ್ರಿಲ್ 30ರೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ಸಮಾಜವಾದಿ ಪಕ್ಷದ ಸಂಸದೆಯಾದ ಬಚ್ಚನ್ ವಿರುದ್ಧ ಬಿಜೆಪಿಯ ಮಾಜಿ ಶಾಸಕ ಜಿತೇಂದ್ರ ಡಾಗಾ ಅವರ ಪುತ್ರ ಅನುಜ್ ಡಾಗಾ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಜಯಾ ಬಚ್ಚನ್ ಅವರಿಗೆ ಮುಂಗಡವಾಗಿ ಒಂದು ಕೋಟಿ ರೂಪಾಯಿ ಪಾವತಿಸಿ ಜಮೀನು ಖರೀದಿಸಲು ಡಾಗಾ ಒಪ್ಪಂದ ಮಾಡಿಕೊಂಡಿದ್ದರು.
ಆದರೆ, ಜಯಾ ಬಚ್ಚನ್ ಒಪ್ಪಿದ ಮೊತ್ತಕ್ಕಿಂತ ಹೆಚ್ಚಿನ ಬೆಲೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಅನುಜ್ ಪರ ವಕೀಲರಾದ ಎನೋಶ್ ಜಾರ್ಜ್ ಕಾರ್ಲೊ ಐಎಎನ್ಎಸ್ಗೆ ಮಾಹಿತಿ ನೀಡಿದ್ದಾರೆ. ಜಯಾ ಬಚ್ಚನ್ ಅವರ ಖಾತೆಗೆ ಹಣ ಜಮೆ ಮಾಡಲಾಗಿತ್ತು. ಆದರೆ, ಕೆಲವು ದಿನಗಳ ನಂತರ, ಆ ಹಣವನ್ನು ಅನುಜ್ ಡಾಗಾ ಅವರ ಖಾತೆಗೆ ಹಿಂತಿರುಗಿಸಿ, ಹೆಚ್ಚಿನ ಬೆಲೆಗೆ ಬೇಡಿಕೆ ಇಡಲಾಗಿದೆ ಎಂದು ಕಾರ್ಲೊ ಹೇಳಿದ್ದಾರೆ.
ಜಯಾ ಬಚ್ಚನ್ ಅವರು ಭೋಪಾಲ್ ಜಿಲ್ಲೆಯ ಸೆವಾನಿಯಾ ಗೌರ್‌ನಲ್ಲಿ ಸುಮಾರು 12 ವರ್ಷಗಳ ಹಿಂದೆ ಖರೀದಿಸಿದ್ದ 5 ಎಕರೆ ಭೂಮಿಯನ್ನು ಹೊಂದಿದ್ದಾರೆ. ರಾಜೇಶ್ ಹೃಷಿಕೇಶ್ ಯಾದವ್ ಎಂಬುವರಿಗೆ ಜಮೀನು ಮಾರಾಟ ಮಾಡಲು ಅಧಿಕಾರ ನೀಡಲಾಗಿದೆ. ಆದರೆ, ಹಣವನ್ನು ಹಿಂದಿರುಗಿಸಿ, ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಕಾರ್ಲೊ ಆರೋಪಿಸಿದ್ದಾರೆ. ನ್ಯಾಯಾಲಯವು ವಿಚಾರಣೆಯನ್ನು ಪರಿಗಣನೆಗೆ ಸ್ವೀಕರಿಸಿದ್ದು, ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ ಏಪ್ರಿಲ್ 30ರಂದು ನಡೆಯಲಿದೆ. ಜಯಾ ಬಚ್ಚನ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಕಾರ್ಲೊ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಕೊನೆಗೂ ಕುತೂಹಲಕ್ಕೆ ಬಿತ್ತು ಬ್ರೇಕ್ : 'ಮನರಂಜನೆಯ ಹೊಸ ಯುಗ ಪ್ರಾರಂಭ'