ಕರ್ನಾಟಕ

karnataka

ETV Bharat / bharat

BharOS.. ಮೊದಲ ಸ್ವದೇಶಿ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌: ಏನಿದರ ವಿಶೇಷತೆ? - ಏನಿದು ಭರೋಸ್

ಭಾರತೀಯರಿಗೆ ಸಿಗಲಿದೆ ಭರೋಸ್ - ಇದು ದೇಶದ ಮೊದಲ ಮೊಬೈಲ್ ಆಪರೇಟಿಂಗ್ ಸಿಸ್ಟಮ್ - ಆಂಡ್ರಾಯ್ಡ್‌ನ ಓಪನ್‌ ಸೋರ್ಸ್‌ ಪ್ರಾಜೆಕ್ಟ್‌ ಆಧಾರಿತ ಆಪರೇಟಿಂಗ್‌ ವ್ಯವಸ್ಥೆ

bharos
ಭರೋಸ್..ಸ್ವದೇಶಿ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌

By

Published : Jan 24, 2023, 7:27 PM IST

ನವದೆಹಲಿ: ಎಲ್ಲಾ ಫೋನ್‌ಗಳು ಕಾರ್ಯನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ ಅಗತ್ಯ. ಹೆಚ್ಚಿನ ಫೋನ್‌ಗಳಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸಲಾಗುತ್ತದೆ. ಆ್ಯಪಲ್ ಫೋನ್‌ಗಳಲ್ಲಿ ಐಒಎಸ್ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬಳಸಲಾಗುತ್ತದೆ. ನಿರಂತರವಾಗಿ ಹೊಸ ಆಪರೇಟಿಂಗ್ ಸಿಸ್ಟಮ್‌ಗಳನ್ನು ಕಂಡು ಹಿಡಿಯಲಾಗುತ್ತಿದೆ. ಹಾಗೆಯೇ ದೇಶಿ ಆಪರೇಟಿಂಗ್ ಸಿಸ್ಟಮ್ (OS) ನನಸಾಗುವ ಕಾಲ ಸನ್ನಿಹಿತವಾಗಿದೆ.

ಹೌದು, ಆಂಡ್ರಾಯ್ಡ್‌, ಐಒಎಸ್‌ನಂಥ ವಿದೇಶಿ ಆಪರೇಟಿಂಗ್ ಸಿಸ್ಟಮ್‌ಗಳ (Operating System) ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತವು ತನ್ನದೇ ಭರೋಸ್(BharOS) ಎಂಬ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದ್ದು, ಇಂದು (ಮಂಗಳವಾರ) ಅದರ ಪರೀಕ್ಷೆ ನಡೆಯಿತು. ಮದ್ರಾಸ್ ಐಐಟಿ ಅಭಿವೃದ್ಧಿಪಡಿಸಿದ ದೇಶಿ ಆಪರೇಟಿಂಗ್ ಸಿಸ್ಟಮ್, ಭರೋಸ್(BharOS) ಅನ್ನು ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಶಿಕ್ಷಣ ಸಚಿವ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪರೀಕ್ಷಿಸಿದರು.

"ಈ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಯ ಪಾಲ್ಗೊಂಡಿರುವ ಎಲ್ಲರಿಗೂ ಅಭಿನಂದನೆಗಳು. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷಗಳ ಹಿಂದೆ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದಾಗ, ನಮ್ಮ ಕೆಲವು ಸ್ನೇಹಿತರು ಅಣಕವಾಡಿದ್ದರು. ಆದರೆ, ತಂತ್ರಜ್ಞರು, ಸಂಶೋಧಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು ಮತ್ತು ದೇಶದ ಶೈಕ್ಷಣಿಕ ಸಂಸ್ಥೆಗಳು ಮೋದಿ ಅವರ ದೂರದೃಷ್ಟಿಯನ್ನು ಸ್ವೀಕರಿಸಿ ಯಶಸ್ವಿಯಾಗುತ್ತಿದ್ದಾರೆ" ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, "ಈ ಪ್ರಯಾಣದಲ್ಲಿ ಸಾಕಷ್ಟು ಅಡೆತಡೆಗಳಿದ್ದವು. ನಮ್ಮ ಸುತ್ತಮುತ್ತ ಸಾಕಷ್ಟು ಜನರು ಸಮಸ್ಯೆಗಳನ್ನು ಸೃಷ್ಟಿಸಲು ಕಾಯುತ್ತಿರುತ್ತಾರೆ. ಅಂತಹ ಜನರು ಯಾವುದೇ ವ್ಯವಸ್ಥೆಯು ಯಶಸ್ವಿಯಾಗಬೇಕೆಂದು ಬಯಸುವುದಿಲ್ಲ" ಎಂದು ಅವರು ಹೇಳಿದರು.

ಏನಿದು ಭರೋಸ್(BharOS)?:ಭರೋಸ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್. ಬಳಕೆದಾರರಿಗೆ ಖಾಸಗಿತನ ಮತ್ತು ಸುರಕ್ಷತೆಯ ಭರವಸೆಯನ್ನು ನೀಡುತ್ತದೆ. ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಒಂದು ಸಾಫ್ಟ್‌ವೇರ್ ಆಗಿದ್ದು, ಗೂಗಲ್‌ನ ಆಂಡ್ರಾಯ್ಡ್ ಮತ್ತು ಆಪಲ್‌ನ ಐಒಎಸ್ ರೀತಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಇಂಟರ್ಫೇಸ್ ಆಗಿದೆ. ಭಾರತದ ಸ್ಥಳೀಯ ಆಪರೇಟಿಂಗ್ ಸಿಸ್ಟಮ್ ಭರೋಸ್ ಅನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನ ಸಹಾಯದಿಂದ ನಡೆಸುತ್ತಿರುವ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಮುಂಬರುವ ದಿನಗಳಲ್ಲಿ ಭರೋಸ್ ತನ್ನ ಸೌಲಭ್ಯಗಳನ್ನು 100 ಕೋಟಿಗೂ ಹೆಚ್ಚು ಮೊಬೈಲ್​ಗೆ ಒದಗಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್:ಈ ಪ್ರಾಜೆಕ್ಟ್‌ ಅನ್ನು ಭಾರತ ಸರ್ಕಾರವೇ ಕೈಗೆತ್ತಿಕೊಂಡಿದೆ. ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಗತ್ಯದ ಹಿನ್ನೆಲೆಯಲ್ಲಿ ಈ ದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಲಾಗಿದೆ. ಇದೊಂದು ಮುಕ್ತ ಮತ್ತು ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳು ಬಳಸಬಹುದಾಗಿದೆ. ವಿದೇಶಿ ಒಎಸ್‌ಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ದೇಶಿ ಒಎಸ್‍ ಅಭಿವೃದ್ಧಿಯ ಮುಖ್ಯ ಉದ್ದೇಶವಾಗಿದೆ.

ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ ಕಾಮಕೋಟಿ ಅವರು ಈ ಕುರಿತು ಮಾತನಾಡಿ, "ಭರೋಸ್ ಸರ್ವಿಸ್ ಎನ್ನುವುದು ನಂಬಿಕೆಯ ತಳಹದಿಯ ಮೇಲೆ ನಿರ್ಮಿಸಲಾದ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಇದು ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ಸರಿಹೊಂದುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಮತ್ತು ಬಳಸಲು ಹೆಚ್ಚಿನ ಸ್ವಾತಂತ್ರ್ಯ, ನಿಯಂತ್ರಣ ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಹೊಸ ವ್ಯವಸ್ಥೆಯು ಬಳಕೆದಾರರಿಗೆ ಮೊಬೈಲ್ ಸಾಧನಗಳಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯ ಭರವಸೆ ನೀಡುತ್ತದೆ" ಎಂದು ಮಾಹಿತಿ ನೀಡಿದರು.

ಭರೋಸ್ ಬಗ್ಗೆ ಒಂದಿಷ್ಟು ಮಾಹಿತಿ:ಭರೋಸ್ ಎನ್ನುವಂಥದ್ದು ಆಂಡ್ರಾಯ್ಡ್‌ನ ಓಪನ್‌ ಸೋರ್ಸ್‌ ಪ್ರಾಜೆಕ್ಟ್‌ ಆಧಾರಿತ ಆಪರೇಟಿಂಗ್‌ ಸಿಸ್ಟಂ. ಇದನ್ನು JandK Operations Private Limited ಅಭಿವೃದ್ಧಿ ಪಡಿಸಿದೆ. JandKops ಎಂಬುದು ಲಾಭ ರಹಿತ ಸಂಘಟನೆಯಾಗಿದೆ. ಇದು ಭಾರತ ಸರ್ಕಾರ ಅನುದಾನ ನೀಡಿದ ಪ್ರಾಜೆಕ್ಟ್‌ ಮೂಲಕ ರೂಪುಗೊಂಡ ಉಚಿತ ಮತ್ತು ಓಪನ್‌ ಸೋರ್ಸ್‌ ಆಪರೇಟಿಂಗ್‌ ಸಿಸ್ಟಮ್‌. ಇದನ್ನು ಸರ್ಕಾರ ಮತ್ತು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ವಿದೇಶಿ ಓಎಸ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಸ್ಥಳೀಯ ಪರಿಸರ ವ್ಯವಸ್ಥೆ ಮತ್ತು ಸ್ವಾವಲಂಬಿ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ದೊಡ್ಡ ಪ್ರಗತಿ.

ಕಟ್ಟುನಿಟ್ಟಾದ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಹೊಂದಿರುವ ಸಂಸ್ಥೆಗಳಿಗೆ ಪ್ರಸ್ತುತ ಭರೋಸ್ ಸೇವೆಗಳನ್ನು ಒದಗಿಸಲಾಗುತ್ತಿದೆ ಮತ್ತು ಅದರ ಬಳಕೆದಾರರು ಮೊಬೈಲ್‌ಗಳಲ್ಲಿ ನಿರ್ಬಂಧಿತ ಅಪ್ಲಿಕೇಶನ್‌ಗಳಲ್ಲಿ ಗೌಪ್ಯ ಸಂವಹನಗಳ ಅಗತ್ಯವಿರುವ ಸೂಕ್ಷ್ಮ ಮಾಹಿತಿಯನ್ನು ನಿರ್ವಹಿಸುತ್ತಾರೆ. ಅಂತಹ ಬಳಕೆದಾರರಿಗೆ ಖಾಸಗಿ 5G ನೆಟ್‌ವರ್ಕ್‌ಗಳ ಮೂಲಕ ಖಾಸಗಿ ಕ್ಲೌಡ್ ಸೇವೆಗಳಿಗೆ ಪ್ರವೇಶದ ಅಗತ್ಯವಿರುತ್ತದೆ.

ಡೀಫಾಲ್ಟ್ ಅಪ್ಲಿಕೇಶನ್ ಇಲ್ಲ:ಭರೋಸ್​ನಲ್ಲಿ ಯಾವುದೇ ಡೀಫಾಲ್ಟ್ ಅಪ್ಲಿಕೇಶನ್ ಇರುವುದಿಲ್ಲ. ಇದರರ್ಥ ಬಳಕೆದಾರರು ತಮಗೆ ಪರಿಚಯವಿಲ್ಲದ ಅಥವಾ ಅವರು ನಂಬದಿರುವ ಅಪ್ಲಿಕೇಶನ್‌ಗಳನ್ನು ಬಲವಂತವಾಗಿ ಬಳಸಬೇಕಾಗಿಲ್ಲ. ಏಕೆಂದರೆ ಅವರು ತಮ್ಮ ಸಾಧನದಲ್ಲಿ ಕೆಲವು ವೈಶಿಷ್ಟ್ಯಗಳು ಅಥವಾ ಡೇಟಾವನ್ನು ಪ್ರವೇಶಿಸಲು ಅಗತ್ಯವಿರುವ ಅಪ್ಲಿಕೇಶನ್‌ಗಳಿಗೆ ಮಾತ್ರ ಅನುಮತಿಗಳನ್ನು ನೀಡಲು ಆಯ್ಕೆ ಮಾಡಬಹುದು.

ಹೆಚ್ಚಿನ ನಿಯಂತ್ರಣ:ಭರೋಸ್ ನ ಪ್ರಸ್ತುತ ಆವೃತ್ತಿಯು DuckDuckGo ಮತ್ತು Signal ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳೊಂದಿಗೆ ಡೀಫಾಲ್ಟ್ ಬ್ರೌಸರ್‌ಗಳು ಮತ್ತು ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್‌ಗಳ ಜತೆಗೆ ಬರುತ್ತದೆ. ಇದಕ್ಕೆ ಹೊರತಾಗಿ, ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಅಪ್ಲಿಕೇಶನ್‌ಗಳು ಹೊಂದಿರುವ ಅನುಮತಿಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಈ ವಿಧಾನವು ಅನುಮತಿಸುತ್ತದೆ.

ವಿಶ್ವಾಸಾರ್ಹ ಅಪ್ಲಿಕೇಶನ್‌:ನಿರ್ದಿಷ್ಟ ಖಾಸಗಿ ಆಪ್ ಸ್ಟೋರ್ ಸೇವೆಗಳಿಂದ (PAAS) ವಿಶ್ವಾಸಾರ್ಹ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಸಂಪೂರ್ಣವಾಗಿ ಪರಿಶೀಲಿಸಲಾದ ಮತ್ತು ಸಂಸ್ಥೆಗಳ ಕೆಲವು ಭದ್ರತೆ ಮತ್ತು ಗೌಪ್ಯತಾ ಮಾನದಂಡಗಳನ್ನು ಪೂರೈಸಿದ ಅಪ್ಲಿಕೇಶನ್‌ಗಳ ಕ್ಯುರೇಟೆಡ್ ಪಟ್ಟಿಗೆ ಪಾಸ್ ಪ್ರವೇಶವನ್ನು ಒದಗಿಸುತ್ತದೆ. ಇದರರ್ಥ ಬಳಕೆದಾರರು ತಾವು ಸ್ಥಾಪಿಸುತ್ತಿರುವ ಅಪ್ಲಿಕೇಶನ್‌ಗಳು ಬಳಸಲು ಸುರಕ್ಷಿತವಾಗಿದೆ ಮತ್ತು ಯಾವುದೇ ಸಂಭಾವ್ಯ ಭದ್ರತಾ ದೋಷಗಳು ಅಥವಾ ಗೌಪ್ಯತೆಗಾಗಿ ಸಂಪೂರ್ಣವಾಗಿ ತನಿಖೆ ಮಾಡಲಾಗಿದೆ ಎಂದು ವಿಶ್ವಾಸ ಹೊಂದಿರಬಹುದು.

ಇದನ್ನೂ ಓದಿ:ಆರೋಗ್ಯ ವಿಮೆ ವೇಟಿಂಗ್​​ ಪಿರಿಯಡ್​ ಎಂದರೇನು? ಇದರ ನಿಯಮ ಮತ್ತು ಷರತ್ತುಗಳು ಹೀಗಿವೆ!

ABOUT THE AUTHOR

...view details