ತೆಲಂಗಾಣ:ರಾಷ್ಟ್ರ ರಾಜಕಾರಣ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಹೆಸರನ್ನು ಕಳೆದ ವರ್ಷ ಅಕ್ಟೋಬರ್ 5 ರಂದು ಘೋಷಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಎಂದಿದ್ದ ಅವರ ಪಕ್ಷಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಿದ್ದರು. ಡಿಸೆಂಬರ್ 15 ರಂದು ಪಕ್ಷದ ರಾಷ್ಟೀಯ ಕಚೇರಿಯನ್ನು ತೆಲಂಗಾಣದಲ್ಲಿ ತೆರದಿದ್ದರು. ಈ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಭಾಗಹಿಸಿದ್ದರು.
ಭಾರತ್ ರಾಷ್ಟ್ರ ಸಮಿತಿಯ ಸಾರ್ವಜನಿಕ ಸಭೆಯನ್ನು ಇದೇ ತಿಂಗಳ 18 ರಂದು ಖಮ್ಮಂನಲ್ಲಿ ನಡೆಸಲು ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ. ದೆಹಲಿ, ಪಂಜಾಬ್ ಮತ್ತು ಕೇರಳ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಭಗವಂತಮಾನ್, ಪಿಣರಾಯಿ ವಿಜಯನ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ. ಈಗಾಗಲೇ ಕೇಜ್ರಿವಾಲ್, ಭಗವಂತಮಾನ್ ಮತ್ತು ಅಖಿಲೇಶ್ ಸಭೆಗೆ ಬರಲು ಒಪ್ಪಿಕೊಂಡಿದ್ದಾರೆ. ಸೋಮವಾರ ಕೇರಳ ಸಿಎಂ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಖಮ್ಮಂ ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಭೆ:18ರಂದುಖಮ್ಮಂ ಜಿಲ್ಲೆಯಲ್ಲಿ ನಡೆಯಲಿರುವ ಭಾರತ ಉದಯ ಸಾರ್ವಜನಿಕ ಸಭೆಯ ಬಗ್ಗೆ ಚರ್ಚೆ ನಡೆಸಲು ಇಂದು ಸಿಎಂ ಕೆಸಿಆರ್ ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವ ಪುವ್ವಾಡ ಅಜಯ್ ಕುಮಾರ್, ಸಂಸದರಾದ ನಾಮ ನಾಗೇಶ್ವರ ರಾವ್, ರವಿಚಂದ್ರ, ಪಾರ್ಥಸಾರಥಿ ರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.
ಖಮ್ಮಂನಲ್ಲಿ ಜಿಲ್ಲಾಧಿಕಾರಿ ಕಚೇರಿ ಉಧ್ಘಾಟನೆ:18 ರಂದು ಸಿಎಂ ಖಮ್ಮಂ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಬಿಆರ್‌ಎಸ್ ಜಿಲ್ಲಾ ಪಕ್ಷದ ನೂತನ ಕಚೇರಿ ಉದ್ಘಾಟನೆ ನಡೆಯಲಿದೆ. ವೈದ್ಯಕೀಯ ಕಾಲೇಜು ಮತ್ತು ಫಾರ್ಮಸಿ ಕಾಲೇಜಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಬಳಿಕ ಖಮ್ಮಂ ಕಲೆಕ್ಟರೇಟ್ ಬಳಿಯ 100 ಎಕರೆ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.