ನವದೆಹಲಿ: ಕೋವಿಡ್ ಲಸಿಕೆ ಝೈಕೋವ್-ಡಿ (ZyCoV-D) ಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲು ಡಿಸಿಜಿಐ ಅನುಮೋದನೆ ಪಡೆಯಲಾಗಿದೆ ಎಂದು ಔಷಧ ಸಂಸ್ಥೆ ಝೈಡಸ್ ಕ್ಯಾಡಿಲಾ ತಿಳಿಸಿದೆ.
ಕಂಪನಿಯು ಈಗ ಸುಮಾರು 30,000 ಸ್ವಯಂ ಸೇವಕರಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಇನ್ನು ಹಂತ I ಮತ್ತು II ಕ್ಲಿನಿಕಲ್ ಪ್ರಯೋಗಗಳಲ್ಲಿ ಝೈಕೋವ್-ಡಿ ಯಶಸ್ವಿಯಾಗಿದೆ.
ಬಹು-ಕೇಂದ್ರಿತ, ಯಾದೃಚಿತ, ಡಬಲ್-ಬ್ಲೈಂಡ್ ಪ್ಲಸೀಬೊ-ನಿಯಂತ್ರಿತ ಅಧ್ಯಯನದ ಭಾಗವಾಗಿ ಝೈಕೋವ್-ಡಿ ಯ ಹಂತ II ಅಧ್ಯಯನವನ್ನು 1,000 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕ ಸ್ವಯಂಸೇವಕರಲ್ಲಿ ನಡೆಸಲಾಗಿದೆ ಎಂದು ಔಷಧ ಸಂಸ್ಥೆ ಮಾಹಿತಿ ನೀಡಿದೆ.
ಈ ಪ್ರಯೋಗವನ್ನು ಸ್ವತಂತ್ರ ದತ್ತಾಂಶ ಸುರಕ್ಷತಾ ಮೇಲ್ವಿಚಾರಣಾ ಮಂಡಳಿ (ಡಿಎಸ್‌ಎಂಬಿ) ಪರಿಶೀಲಿಸಿದೆ ಹಾಗೂ ಸುರಕ್ಷತಾ ಫಲಿತಾಂಶದ ನವೀಕರಣಕ್ಕಾಗಿ ವರದಿಗಳನ್ನು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಗೆ ನಿಯಮಿತವಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ನಮ್ಮ ಲಸಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಾವು ನಿರ್ಣಾಯಕ ಮೈಲಿಗಲ್ಲನ್ನು ತಲುಪುತ್ತಿದ್ದೇವೆ. ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡುವ ನಮ್ಮ ಗುರಿಯತ್ತ ನಾವು ಸಾಗುತ್ತಿದ್ದೇವೆ ಎಂದು ಔಷಧ ಸಂಸ್ಥೆಯ ಅಧ್ಯಕ್ಷ ಪಂಕಜ್ ಆರ್ ಪಟೇಲ್ ಹೆಮ್ಮೆಪಟ್ಟಿದ್ದಾರೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಭಾನುವಾರ ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ಗೆ ಆಯಾ ಲಸಿಕೆಗಳಿಗೆ ಅನುಮೋದನೆ ನೀಡಿದೆ.