ಕಣ್ಣೂರು (ಕೇರಳ): ಹೆಬ್ಬಾವನ್ನು ಕಟ್ಟಿ ಹಾಕಿ ಕ್ರೂರವಾಗಿ ಕೊಂದ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ. ಯುವಕರು ಹತ್ಯೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಸಾಮಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವನ್ಯಜೀವಿ ಮತ್ತು ಪರಿಸರ ಕಾರ್ಯಕರ್ತ ವಿಜಯ್ ನೀಲಕನಾಡನ್ ಯುವಕರ ವಿರುದ್ಧ ದೂರು ನೀಡಿದ್ದಾರೆ.
ಕೆಲಸಕ್ಕಾಗಿ ತಾಲಿಪರಂಬ ಚಿರವಾಕ್ಕುಗೆ ತೆರಳಿದ್ದ ಕಾರ್ಮಿಕರು ಹೆಬ್ಬಾವಿನ ಕುತ್ತಿಗೆಗೆ ಹಗ್ಗ ಕಟ್ಟಿ ಕೊಂದಿದ್ದಾರೆ. ತಾಲಿಪರಂಬ ಅರಣ್ಯ ಶ್ರೇಣಿ ಅಧಿಕಾರಿ ಜಯಪ್ರಕಾಶ್ ನೇತೃತ್ವದ ತಂಡ ದೂರಿನ ಆಧಾರದ ಮೇಲೆ ಸ್ಥಳ ಪರಿಶೀಲನೆ ನಡೆಸಿದೆ.
ಹಾವನ್ನು ಕೊಂದಿರುವ ಕಪ್ಪಿಮಲಾ ಮೂಲದ ಯುವಕನೊಬ್ಬನನ್ನು ಗುರುತಿಸಲಾಗಿದೆ. ಮತ್ತೊಬ್ಬ ಯುವಕ ವಿಡಿಯೋ ರೆಕಾರ್ಡ್ ಮಾಡಿದ್ದು, ಘಟನೆಯ ಸಂದರ್ಭ ಮೂವರು ಸ್ಥಳದಲ್ಲಿದ್ದರು ಎಂದು ದೂರುದಾರ ವಿಜಯ್ ನೀಲಕಂದನ್ ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಹೆಬ್ಬಾವುಗಳನ್ನು ಸಂರಕ್ಷಿತ ಜಾತಿಗಳು ಎಂದು ವರ್ಗೀಕರಿಸಲಾಗಿದೆ. ಹೆಬ್ಬಾವು ಹಿಡಿಯುವುದು, ಅವುಗಳಿಗೆ ಹಾನಿ ಮಾಡುವುದು ಅಥವಾ ಕೊಲ್ಲುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದ್ದು, ಆರೋಪಿಗಳಿಗೆ ದಂಡದ ಜೊತೆಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಘಟನೆಯ ತನಿಖೆ ನಡೆಯುತ್ತಿದ್ದು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಲಾಗುವುದು ಎಂದು ತಾಲಿಪರಂಬ ಅಧಿಕಾರಿ ತಿಳಿಸಿದ್ದಾರೆ.