ಬಾರ್ಮರ್ (ರಾಜಸ್ಥಾನ) : ನವೆಂಬರ್ನಲ್ಲಿ ನಾಪತ್ತೆಯಾಗಿದ್ದ ಬಾರ್ಮರ್ ಜಿಲ್ಲೆಯ 20 ವರ್ಷದ ಯುವಕ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾನೆಂದು ಬಿಎಸ್ಎಫ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 16 ರಂದು ಗಡಿ ದಾಟಿ ಪಾಕಿಸ್ತಾನಕ್ಕೆ ಹೋದ ವೇಳೆ ಅಲ್ಲಿನ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಕುಮಾರೊ ಕಾ ತಿಬ್ಬಾ ಗ್ರಾಮದ ನಿವಾಸಿ ಗೆಮ್ರಾ ರಾಮ್ ಮೇಘವಾಲ್ ಕಳೆದ 77 ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಬಿಜ್ರಾಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ರಾಮ್ ಮೇಘವಾಲ್ನನ್ನು ಪತ್ತೆ ಹಚ್ಚಲಾಗಿರಲಿಲ್ಲ.