ಅಲಿಗಢ (ಉತ್ತರ ಪ್ರದೇಶ):ಯುವಕರಿಬ್ಬರ ನಡುವಿನ ವಾಗ್ವಾದ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಅಲಿಗಢದ ಜರಾರಾ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಅಜಿತ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಗ್ರಾಮದ ಫಾರ್ಮ್ನಲ್ಲಿ ಈ ಘಟನೆ ನಡೆದಿದ್ದು, ಅಜಿತ್ ಹಾಸ್ಯ ಮಾಡಿದ್ದನ್ನು ಸಹಿಸದ ಆತನ ಸ್ನೇಹಿತನೊಬ್ಬ ಸಿಟ್ಟಿನಲ್ಲಿ ಆಯುಧಯೊಂದರಿಂದ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಅಜಿತ್ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.
ಡೈರಿ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೆಲ್ಲರೂ ಮಾತನಾಡುತ್ತ ಕುಳಿತಿದ್ದರು. ಜಾಲಿ ಮೂಡಿನಲ್ಲಿದ್ದ ಅಜಿತ್, ಕೆಲಸ ಬದಿಗಿಟ್ಟು ಸಹೋದ್ಯೋಗಿಗಳೊಂದಿಗೆ ಜೋಕ್ ಮಾಡುತ್ತಿದ್ದನು. ಇದನ್ನು ಸಹಿಸದ ಆತನ ಸ್ನೇಹಿತ ಪ್ರಮೋದ್, ಕೆಲಸದ ಬಗ್ಗೆ ಗಮನಿಸುವಂತೆ ತಿಳಿ ಹೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಸಿಟ್ಟಿನ ಭರದಲ್ಲಿ ಪ್ರಮೋದ್, ಚೂಪಾದ ಆಯುಧದಿಂದ ಅಜಿತನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಅಜಿತನನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.