ವಿಜಯನಗರ:ಪ್ರೀತಿಸಿದ್ಲು... ಎಷ್ಟೋ ಆಸೆಯಿಂದ ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡಳು. ಆದ್ರೆ ಎರಡೇ ತಿಂಗಳಿಗೆ ಆ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ರಾಮಭದ್ರಪುರಂನಲ್ಲಿ ನಡೆದಿದೆ.
ಮಿರ್ತಿಪಲಸ ಗ್ರಾಮದ ರಾಂಬಾರ್ಕಿ ವೆಂಕಟರಮಣ ಮತ್ತು ನಾಗಸುಧಾರಾಣಿ ಎಂಬುವವರು ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರಿಗೆ ಇಷ್ಟವಿಲ್ಲದಿದ್ದರೂ ಇಬ್ಬರು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಗಂಡನ ಮನೆಗೆ ತೆರಳಿದ ನಾಗಸುಧಾರಾಣಿಗೆ ಕಿರುಕುಳ ಎದುರಾಯ್ತು.
ಪ್ರತಿನಿತ್ಯ ನಾಗಸುಧಾರಾಣಿಗೆ ಗಂಡ ಮತ್ತು ಆತನ ಕುಟುಂಬದವರು ಕಿರುಕುಳ ನೀಡಲು ಪ್ರಾರಂಭಿಸಿದರಂತೆ. ಇದರಿಂದ ಬೇಸತ್ತ ನಾಗಸುಧಾರಾಣಿ ಕೀಟನಾಶಕ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ನೋಡಿದ ಗಂಡನ ಕುಟುಂಬಸ್ಥರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಾಗಸುಧಾರಾಣಿ ಅಸುನೀಗಿದ್ದಾಳೆ.
ಇನ್ನು ಮೃತಳ ಪೋಷಕರು ಆಕೆಯ ಗಂಡ ಮತ್ತು ಗಂಡನ ಕುಟುಂಬಸ್ಥರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.