ಚಂದ್ರಾಪುರ್(ಮಹಾರಾಷ್ಟ್ರ):ಲಾಕ್‌ಡೌನ್ ವೇಳೆ ಅನೇಕ ಕಂಪನಿಗಳು ಜಾಬ್ ಕಟ್ ಮಾಡಿದ್ದವು. ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಹಲವರು ಬೇರೆ ದಾರಿ ಕಾಣದೆ ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗಿ ಬದುಕು ಮುಗಿಸಿದರು. ಇನ್ನೂ ಕೆಲವರು ಕೂಲಿ ಕೆಲಸಕ್ಕೂ ಸೈ ಎಂದರು. ಇಂಥ ಉದಾಹರಣೆಗಳು ಬಹಳಷ್ಟಿವೆ.
ಹೀಗೆ ಅನ್ನ ನೀಡುವ ಉದ್ಯೋಗ ಕಳೆದುಕೊಂಡ ಮಹಾರಾಷ್ಟ್ರದ ಇಂಜಿನಿಯರ್ ಒಬ್ಬ ತೀವ್ರ ಸ್ವರೂಪದ ಮಾನಸಿಕ ಖಿನ್ನತೆಯಿಂದ ಹೊರಬಂದಿದ್ದು ಹೇಗೆ? ಅನ್ನೋದೇ ಈ ಸ್ಟೋರಿ. ಈತನ ಹೆಸರು ಪಲಾಶ್ ಜೈನ್. ಚಂದ್ರಾಪೂರದ ನಿವಾಸಿ. ಪ್ರತಿಷ್ಠಿತ ಕಂಪನಿಯಲ್ಲಿ ಕೈತುಂಬಾ ರೊಕ್ಕ ತಂದುಕೊಡುವ ಉದ್ಯೋಗವಿತ್ತು. ಕೆಲಸವೇನೋ ಸಲೀಸಾಗಿಯೇ ಸಾಗುತ್ತಿತ್ತು. ಆದರೆ ಯಾವಾಗ ಲಾಕ್‌ಡೌನ್ ಘೋಷಣೆಯಾಯಿತೋ ಕಂಪನಿ ಇವರಿಗೆ ಗೇಟ್‌ಪಾಸ್ ಕೊಟ್ಟಿದೆ. ಪರಿಣಾಮ, ಉದ್ಯೋಗವಿಲ್ಲದ ಇವರು ನರಕ ಯಾತನೆ ಅನುಭವಿಸಿದರು. ಆದ್ರೆ, ಸಾವಿನ ಕದತಟ್ಟಲಿಲ್ಲ. ಹೊಸ ಬಗೆಯ ಬದುಕಿನ ಅವಕಾಶಗಳ ಬಗ್ಗೆ ಯೋಚಿಸಿದರು. ಹೀಗೆ ತಲೆಗೆ ಹುಳಬಿಟ್ಟುಕೊಂಡಾಗ ಹೊಳೆದಿದ್ದೇ ಇಡ್ಲಿ ಸೆಂಟರ್!