ಇಂದೋರ್ (ಮಧ್ಯಪ್ರದೇಶ): ಎರಡು ದಶಕಗಳ ಹಿಂದೆ ಗೊತ್ತಿಲ್ಲದೆ ರೈಲಿನಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಬಾಲಕಿ ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ತನ್ನ ಕುಟುಂಬವನ್ನು ಹುಡುಕುತ್ತಿದ್ದಾಳೆ.
ಬಾಲ್ಯದಲ್ಲೇ ಕುಟುಂಬದಿಂದ ಬೇರ್ಪಟ್ಟಿದ್ದ ಕಿವುಡ ಮತ್ತು ಮೂಕಳಾಗಿರುವ ಗೀತಾ (30)ರನ್ನು ಮಾಜಿ ವಿದೇಶಾಂಗ ಸಚಿವೆ ದಿ.ಸುಷ್ಮಾ ಸ್ವರಾಜ್ ಅವರ ಪ್ರಯತ್ನದಿಂದಾಗಿ 2015ರಲ್ಲಿ ಭಾರತಕ್ಕೆ ಮರಳಿ ಕರೆತರಲಾಗಿತ್ತು. ಆಕೆಯ ಕುಟುಂಬವನ್ನು ಹುಡುಕುವ ಜವಾಬ್ದಾರಿಯನ್ನು ಮಧ್ಯಪ್ರದೇಶದ ಇಂದೋರ್‌ನ ಆನಂದ್ ಸೇವಾ ಸೊಸೈಟಿ ವಹಿಸಿಕೊಂಡಿತ್ತು.
ಗೀತಾ ಕೇವಲ ಸನ್ನೆಗಳ ಮೂಲಕ ತನ್ನ ಊರಿನ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾಳೆ. ಸನ್ನೆಗಳ ಮೂಲಕ ಗೀತಾ ಕಬ್ಬು, ಅಕ್ಕಿ ಮತ್ತು ಕಡಲೆ ಬೆಳೆಗಳ ಬಗ್ಗೆ ತಿಳಿಸಿದ್ದು, ಇದು ಆಕೆಯ ಸ್ಥಳೀಯ ಬೆಳೆಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ತೆಲುಗು ನಟ ಮಹೇಶ್ ಬಾಬು ಅವರ ಅಭಿಮಾನಿಯಾಗಿದ್ದಾಳೆ. ಮನೆಯಲ್ಲಿ ಇಡ್ಲಿ ಮತ್ತು ದೋಸೆ ತಿಂಡಿಗಳನ್ನು ಮಾಡುತ್ತಾರೆ ಎಂದು ತಿಳಿಸಿದ್ದಾಳೆ. ತನ್ನ ಹಳ್ಳಿಯ ಸಮೀಪ ರೈಲ್ವೆ ನಿಲ್ದಾಣವಿದೆ, ನದಿಯ ತಟದಲ್ಲಿ ದೇವಾಲಯವಿದೆ ಎಂದು ಹೇಳಿದ್ದಾರೆ.