ಹೈದರಾಬಾದ್:ಆತ ಯುವ ಕಾಂಗ್ರೆಸ್ ನಾಯಕ. ಆತನ ತಂದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ, ರಸ್ತೆ ಅಪಘಾತದಲ್ಲಿ ಕೈ ನಾಯಕ ಮೃತಪಟ್ಟಿರುವ ಘಟನೆ ಮೆಡ್ಚಲ್-ಮಲ್ಕಾಜಿಗಿರಿ ಜಿಲ್ಲೆಯ ಬಾಚುಪಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಿಯಾಪುರ್ ನಿವಾಸಿ ಪಿ. ಸಾಯಿ ಶಿವಕಾಂತರಾವು (35) ವ್ಯಾಪಾರಸ್ಥ ಮತ್ತು ಯುವಜನ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಆತನ ತಂದೆ ವೆಂಕಟೇಶ್ವರರಾವ್ ಮಾಜಿ ಎಸ್ಪಿಯಾಗಿದ್ದು, ಅನಾರೋಗ್ಯ ಕಾರಣದಿಂದ ಮೂರು ದಿನದಿಂದ ಕೊಂಡಾಪೂರಿನ ಕಿಮ್ಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವ ಕಾಂಗ್ರೆಸ್ ನಾಯಕ ದುರ್ಮರಣ ತಂದೆ ಬಳಿ ಸಹಾಯಕವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಿಟ್ಟು ಬರಲು ಪಿ.ಸಾಯಿ ಮಧ್ಯೆರಾತ್ರಿ ಸಮಯದಲ್ಲಿ ಬಾಚುಪಲ್ಲಿಗೆ ಬಂದಿದ್ದಾರೆ. ಬಳಿಕ 1.15ರ ಸಮಯದಲ್ಲಿ ಮಿಯಾಪೂರ್ ಕಡೆ ಹೋಗುತ್ತಿರುವಾಗ ರಸ್ತೆ ಮೇಲೆ ಅಡ್ಡವಾಗಿ ನಿಲ್ಲಿಸಿದ್ದ ಟ್ರಕ್ನ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಮುಂಭಾಗ ಧ್ವಂಸವಾಗಿದ್ದು, ಪಿ.ಸಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ಪಿ.ಸಾಯಿಗೆ ಹೆಂಡ್ತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಅಪಘಾತ ಸಂಬಂಧ ಬಾಚುಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.