ಹೈದರಾಬಾದ್:ಇಸ್ರೋ ಮಹತ್ವಾಕಾಂಕ್ಷೆಯ ಯೋಜನೆ 'ಚಂದ್ರಯಾನ-2' ನಿರ್ಣಾಯಕ ಘಟ್ಟದಲ್ಲಿ ವಿಕ್ರಂ ಲ್ಯಾಂಡರ್ನಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದ್ದು, ಆದರೂ ಈ ಯೋಜನೆಯಲ್ಲಿ ನಾವು ಶೇ.95ರಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ಇಸ್ರೋ ಈಗಾಗಲೇ ಮಾಹಿತಿ ನೀಡಿದೆ.
ಇಲ್ಲಿಯವರೆಗೂ ಯಾವುದೇ ದೇಶ ಮಾಡದ ಚಂದ್ರನ ದಕ್ಷಿಣ ಗೋಳಾರ್ಧ ಅಧ್ಯಯನ ಮಾಡುವ ಯೋಜನೆ ರೂಪಿಸಿದ್ದ ಇಸ್ರೋ ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿರುವಾಗ ಭೂಮಿಯಿಂದ ತನ್ನ ಸಂಪರ್ಕ ಕಳೆದುಕೊಂಡಿತು. ಇದು ವಿಜ್ಞಾನಿಗಳಲ್ಲಿ ಸ್ವಲ್ಪ ಮಟ್ಟದ ನಿರಾಸೆಗೆ ಕಾರಣವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಸ್ರೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾಸಾ, ನೀವೂ ಕೈಗೊಂಡಿದ್ದ ಯೋಜನೆ ನಿಜಕ್ಕೂ ಕಠಿಣವಾದದ್ದು, ಅದರಿಂದ ನಾವು ಸ್ಪೂರ್ತಿ ಪಡೆದುಕೊಂಡಿದ್ದೇವೆ ಎಂದು ಹೇಳಿದೆ. ಇಂತಹ ಕ್ಲಿಷ್ಟಕರವಾದ ಯೋಜನೆ ರೂಪಿಸಿರುವ ನಿಮ್ಮ ಧೈರ್ಯ ನಿಜಕ್ಕೂ ಮೆಚ್ಚುವಂತಹದ್ದು, ಇದನ್ನ ನಾವು ಪ್ರಶಂಸೆ ಮಾಡಲಿದ್ದು, ನಮ್ಮ ಮುಂದಿನ ಸೌರವ್ಯೂಹ ಅನ್ವೇಷನೆ ಯೋಜನೆಗೆ ನಿಮ್ಮಿಂದ ಸಹಾಯ ಪಡೆದುಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ.
ಇದರ ಮಧ್ಯೆ ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಪೇಸ್ (ಯುಎಇ) ಚಂದ್ರನ ಮೇಲೆ ಇಳಿಯಬೇಕಾಗಿದ್ದ ಚಂದ್ರಯಾನ್2 ಬಾಹ್ಯಾಕಾಶ ನೌಕೆಯೊಂದಿಗಿನ ತನ್ನ ಸಂಪರ್ಕ ಕಳೆದುಕೊಂಡಿದ್ದು, ಇಸ್ರೋಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ನೀವೂ ಕೈಗೊಂಡಿರುವ ಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದೆ.ಆಸ್ಟ್ರೇಲಿಯಾ ಸ್ಪೇಸ್ ಏಜನ್ಸಿ ಕೂಡ ಇಸ್ರೋಗೆ ಅಭಿನಂದನೆ ಸಲ್ಲಿಕೆ ಮಾಡಿದ್ದು, ನಿಮ್ಮ ಕಾರ್ಯ ಶ್ಲಾಘನೀಯ ಎಂದು ತಿಳಿಸಿ ಟ್ವೀಟ್ ಮಾಡಿದೆ.
ಇಲ್ಲಿಯವರೆಗೆ ಚಂದ್ರನ ಅಂಗಳಕ್ಕೆ ರಷ್ಯಾ, ಅಮೆರಿಕ ಮತ್ತು ಚೀನಾ ರಾಷ್ಟ್ರಗಳು ರೋವರ್ ಕಳುಹಿಸಿವೆ. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಇಲ್ಲಿಯವರೆಗೆ ಕಾಲಿಟ್ಟಿಲ್ಲ. ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗುವುದರಲ್ಲಿತ್ತು. ಆದರೆ, ಈ ಪ್ರಯತ್ನ ಕೊನೆಯ ಕ್ಷಣದಲ್ಲಿ ಮಿಸ್ ಆಗಿದೆ.