ನವದೆಹಲಿ:ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಕುರಿತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮಹಿಳೆಯರಿಗೆ ಯಾವುದೇ ಭದ್ರತೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ. ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದರು. ದೆಹಲಿಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನಿಡಲಾಗುತ್ತಿತ್ತು.
ಆದರೆ ಎರಡು ವಾರಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಂತ್ರಸ್ತೆ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಹತ್ರಾಸ್, ಶಹಜಹಾನ್ಪುರ ಮತ್ತು ಗೋರಖ್ಪುರದಲ್ಲಿ ಒಂದರ ನಂತರ ಒಂದರಂತೆ ನಡೆದ ಅತ್ಯಾಚಾರದ ಘಟನೆಗಳು ರಾಜ್ಯವನ್ನು ಬೆಚ್ಚಿಬೀಳಿಸಿವೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
"ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಬಹಳ ಹದಗೆಟ್ಟಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಅಪರಾಧಿಗಳು ಬಹಿರಂಗವಾಗಿ ಅಪರಾಧಗಳನ್ನು ಮಾಡುತ್ತಿದ್ದಾರೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಈ ಹುಡುಗಿಯ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯುಪಿಯಲ್ಲಿ ಮಹಿಳೆಯರ ಸುರಕ್ಷತೆಗೆ ನೀವು ಜವಾಬ್ದಾರರಾಗಿರುತ್ತೀರಿ ಎಂದು ಕಾಂಗ್ರೆಸ್ ಮುಖಂಡೆ ಟ್ವೀಟ್ ಮಾಡಿದ್ದಾರೆ.
ಆರೋಪಿಗಳು ಸಂತ್ರಸ್ತೆಯ ಕತ್ತು ಹಿಸುಕಲು ಪ್ರಯತ್ನಿಸಿದ್ದರು. ಇದರಿಂದಾಗಿ ಆಕೆ ತನ್ನ ನಾಲಿಗೆಯನ್ನು ತಾನೇ ಕಡಿದುಕೊಂಡು ತೀವ್ರವಾಗಿ ಗಾಯಗೊಂಡಿದ್ದಳು.