ನವದೆಹಲಿ:ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಖಾಸಗಿ ರಂಗದ ಪ್ರಮುಖ ಯೆಸ್ ಬ್ಯಾಂಕ್ನಲ್ಲಿ ಬಿಕ್ಕಟ್ಟು ಉದ್ಭವವಾಗಿದ್ದು, ಅದರಲ್ಲಿ ನಡೆದಿರುವ ಅಕ್ರಮದ ಬಗ್ಗೆ ಇದೀಗ ಸಿಬಿಐ ತನಿಖೆ ನಡೆಸುತ್ತಿದೆ.
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಆತನ ಪತ್ನಿ ಬಿಂದು ರಾಣಾ ಕಪೂರ್ ಹಾಗೂ ಮಗಳು ರೋಶಿನಿ ಕಪೂರ್, ರಕ್ಷಾ ಕಪೂರ್ ಹಾಗೂ ರಾಧಾ ಕಪೂರ್ DHFLನ ಚೇರಮನ್ ಕಪಿಲ್ ಹಾಗೂ ಡೈರೆಕ್ಟರ್ ಧೀರಜ್ ರಾಜೇಶ್ ಕುಮಾರ್ಗೆ ಇದೀಗ ಸಿಬಿಐ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಪ್ರಮುಖ ಸ್ಥಳಗಳಲ್ಲಿ ಸಿಬಿಐ ಶೋಧಕಾರ್ಯ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಯೆಸ್ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಕುಟುಂಬ, ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ (ಡಿಎಚ್ಎಫ್ಎಲ್) ಮಾಲೀಕತ್ವದ ಕಂಪನಿಗಳೊಂದಿಗೆ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಶಂಕೆ ಸಿಬಿಐ ವಿಚಾರಣೆ ವೇಳೆ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅಧಿಕಾರಿಗಳು ಪ್ರಮುಖ 7 ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದು, ಪ್ರಮುಖ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ದಕ್ಷಿಣ ಮುಂಬೈನಲ್ಲಿರುವ ಬಲ್ಲಾರ್ಡ್ ಪಿಯರ್ ಕಚೇರಿ, ಕಪೂರ್ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ ಹಾಗೂ ಜೂನ್ 2018ರಲ್ಲಿ ಯೆಸ್ ಬ್ಯಾಂಕ್ 3,700 ರೂ ಡಿಎಚ್ಎಫ್ಎಲ್ ಸಾಲದ ರೂಪದಲ್ಲಿ ನೀಡಿತ್ತು. ಇದಾದ ಬಳಿಕ ಬೇರೆ ಬೇರೆ ಕಂಪನಿಗಳಿಗೆ ಹಣವನ್ನ ಕಿಕ್ಬ್ಯಾಕ್ ನೀಡಿದೆ ಎಂಬ ಅಂಶ ತನಿಖೆ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ವರದಿಯಾಗಿದೆ.