ನವದೆಹಲಿ:ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷವನ್ನು 'ನಿರಾಶೆ, ವಿನಾಶಕಾರಿ ನಿರ್ವಹಣೆಯ ನೋವಿನ ಆಡಳಿತ ವರ್ಷ' ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿ ಟೀಕಿಸಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರು, ಮೋದಿ ಆಡಳಿತದ ಆರು ವರ್ಷಗಳಲ್ಲಿ ಕೋಮು ಮತ್ತು ಪಂಥೀಯ ಹಿಂಸಾಚಾರ ಹೆಚ್ಚಳದೊಂದಿಗೆ ಭ್ರಾತೃತ್ವ ಮತ್ತು ಸಹೋದರತ್ವದ ಬಂಧಗಳು ಹಾಳಾಗಿವೆ ಎಂದು ಆಪಾದಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಮಾತನಾಡಿ, ಆರು ವರ್ಷಗಳ ಕೊನೆಯಲ್ಲಿ ಮೋದಿ ಸರ್ಕಾರವು ತನ್ನ ಜನರೊಂದಿಗೆ ಯುದ್ಧದಲ್ಲಿ ತೊಡಗಿದೆ. ಅವರನ್ನು ಗುಣಪಡಿಸುವ ಬದಲು ಅವರ ಮೇಲೆ ಗಾಯಗಳನ್ನು ಮಾಡುತ್ತಿದೆ. ಈ ಸರ್ಕಾರವು ಕೆಲ ಶ್ರೀಮಂತರ ಬೊಕ್ಕಸವನ್ನು ತುಂಬಿಸಲು ಪ್ರಯತ್ನಿಸುತ್ತಿದೆ. ಬಡವರಿಗೆ ನೋವುಂಟುಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಕೋವಿಡ್-19 ಬಿಕ್ಕಟ್ಟಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್ ಅವರು, ಪ್ರತಿಪಕ್ಷವು ಯಾವುದೇ ರಾಜಕೀಯ ಮಾಡುತ್ತಿಲ್ಲ. ಬದಲಾಗಿ ಸಲಹೆಗಳನ್ನು ನೀಡಿದೆ. ಜವಾಬ್ದಾರಿಯುತ ಪ್ರತಿಪಕ್ಷ ಆಗಿರುವುದರಿಂದ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವುದು ನಮ್ಮ ಕರ್ತವ್ಯ. ಪತ್ರತಿಪಕ್ಷವಾಗಿ ನಾವು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದೇವೆ ಎಂದರು.