ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆ ಜನರನ್ನು ಪರಿಹಾರ ಶಿಬಿರಗಳಿಗೆ ಅಥವಾ ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ (ಪೂರ್ವ) ಸಂಬಂಧಪಟ್ಟ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಿಗೆ ಆದೇಶ ಹೊರಡಿಸಿದೆ.
"ಭಾರೀ ಮಳೆಯಿಂದಾಗಿ ಮತ್ತು ಹಟ್ನಿ ಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾಗಿರುವುದರಿಂದ ಯಮುನಾ ನದಿಯ ನೀರಿನ ಮಟ್ಟವು ನಾಳೆ ಅಂದರೆ ಆಗಸ್ಟ್ 19ರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ 207 ಮೀಟರ್ ಏರಿಕೆಯಾಗುವ ಸಾಧ್ಯತೆಯಿದೆ. ಜೊತೆಗೆ ಸಾರ್ವಜನಿಕ ಜೀವನ ಮತ್ತು ಆಸ್ತಿಗೆ ಅಪಾಯವಾಗುವ ಸಂಭವವಿದೆ.
ಅಷ್ಟೇಅಲ್ಲದೆ, ಯಮುನಾ ನದಿಯ ತಟದಲ್ಲಿ ಅನೇಕ ಜನರು ವಾಸ ಮಾಡುವುದು/ಕೆಲಸ ಮಾಡುವುದು/ಅಲೆದಾಡುವುದು ಗಮನಕ್ಕೆ ಬಂದಿದೆ. ಸದ್ಯ ಪ್ರವಾಹ ಸಂಭವಿಸುವ ಪರಿಸ್ಥಿತಿಯಿದ್ದು, ಜಿಲ್ಲೆಯ ಪೂರ್ವ ತಗ್ಗು ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವಂತೆ ನಾನು ಎಸ್‌ಡಿಎಂ ಗಳಿಗೆ ನಿರ್ದೇಶಿಸುತ್ತೇನೆ. ದೆಹಲಿ ಪೊಲೀಸ್ ಮತ್ತು ಸಿಡಿವಿಗಳ ನೆರವಿನಿಂದ ಆಗಸ್ಟ್ 19ರ ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಎಲ್ಲರನ್ನು ಪರಿಹಾರ ಶಿಬಿರ ಅಥವಾ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ "ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ದೆಹಲಿಯ ತಗ್ಗು ಪ್ರದೇಶಗಳ ಮೇಲೆ ಬ್ಯಾರೇಜ್ ನೀರಿನಿಂದ ಬೀರಬಹುದಾದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮಧ್ಯಾಹ್ನ 3 ಗಂಟೆಯವರೆಗೆ 7,60,466 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ಹರಿದೇವ್ ಕಾಂಬೋಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.