ಚೀನಾದ ವುಹಾನ್‌ನಲ್ಲಿ ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಎಂಬ ಮಹಾಮಾರಿ ಕೇವಲ ಚೀನಾದ ಇತರ ಭಾಗಗಳಿಗೆ ಹರಡುವುದಷ್ಟೇ ಅಲ್ಲ, ಪ್ರಪಂಚದ ಇನ್ನಿತರ ದೇಶಗಳಿಗೂ ನಿಧಾನವಾಗಿ ಹರಡುತ್ತಲೇ ಇದೆ.
ವೈರಸ್ ಹರಡುವುದನ್ನು ತಡೆಯಲು ಚೀನಾ ಸರ್ಕಾರವು ಈಗಾಗಲೇ 16 ನಗರಗಳನ್ನು ಸಂಪೂರ್ಣವಾಗಿ ಮುಚ್ಚಿದೆ. ಈ ನಗರಗಳ ಅಪಾರ್ಟ್‌ಮೆಂಟ್‌ಗಳಿಗೆ ಜನರು ತೆರಳಲು ಮತ್ತು ಇಂತಹ ಅಪಾರ್ಟ್‌ಮೆಂಟ್‌ಗಳಿಂದ ಜನರು ಹೊರಗಡೆ ಬರುವುದನ್ನೂ ನಿರ್ಬಂಧಿಸಿದೆ. ಎಲ್ಲರೂ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕಿದೆ. ಇಷ್ಟೇ ಅಲ್ಲ, ಹಲವು ಇತರ ನಿರ್ಬಂಧಗಳನ್ನೂ ಇಲ್ಲಿನ ಸರ್ಕಾರ ವಿಧಿಸಿದೆ. ಚೀನಾದಲ್ಲಿ ಹೊಸ ವರ್ಷವನ್ನು ಆಚರಿಸಿ ತಾವು ಕೆಲಸ ಮಾಡುತ್ತಿದ್ದ ದೇಶಗಳಿಗೆ ವಾಪಸಾಗಲು ಬಯಸಿದ್ದ ಸುಮಾರು ಏಳು ಮಿಲಿಯನ್ ಜನರಿಗೆ ಈ ನಿರ್ಬಂಧಗಳು ಸಮಸ್ಯೆಯಾಗಿ ತಲೆದೋರಿವೆ. ಇವರು ತಮ್ಮ ಮನೆಗಳಿಂದ ಹೊರಬರಲೂ ಆಗುತ್ತಿಲ್ಲ. ಇದರಿಂದಾಗಿ ಹೆನೆನ್, ಹುಬೈ, ಝೆಜಿಯಾಂಗ್, ಗ್ವಾಂಗ್‌ಡಾಂಗ್ ಇತ್ಯಾದಿ ನಗರಗಳಲ್ಲಿರುವ ಉತ್ಪಾದನಾ ಘಟಕಗಳು ಸೊರಗುತ್ತಿವೆ. ಇಲ್ಲಿ ನಿರೀಕ್ಷೆಯ ಮಟ್ಟಕ್ಕೆ ಉತ್ಪಾದನೆ ನಡೆಯುತ್ತಿಲ್ಲ. ಹುಬೈ ರಾಜ್ಯದ ರಾಜಧಾನಿಯಾಗಿರುವ ವುಹಾನ್‌ನಲ್ಲಿ ಜಪಾನ್‌ನ ವಾಹನ ಕಂಪನಿಗಳಾದ ಹೋಂಡಾ ಮತ್ತು ನಿಸಾನ್ ಹಾಗೂ ಹಲವು ಐರೋಪ್ಯ ದೇಶಗಳ ವಾಹನ ತಯಾರಿಕೆ ಕಂಪನಿಗಳು ತಮ್ಮ ಘಟಕಗಳನ್ನು ಸ್ಥಾಪಿಸಿದ್ದವು. ಜರ್ಮನಿಯ ವೋಕ್ಸ್ ವ್ಯಾಗನ್ ಗ್ರೂಪ್ ಈಗಾಗಲೇ ಮನೆಯಿಂದಲೇ ಕೆಲಸ ಮಾಡುವಂತೆ 3,500 ಜನರಿಗೆ ಸೂಚನೆ ನೀಡಿದೆ. ಇವರು ಕೆಲಸಕ್ಕಾಗಿ ಫ್ಯಾಕ್ಟರಿಗಳಿಗೆ ತೆರಳಬೇಕಿಲ್ಲ. ಇವರು ಫ್ಯಾಕ್ಟರಿಗೆ ಬಂದರೆ ಸೋಂಕು ಇಲ್ಲಿಗೂ ಹರಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಕಂಪನಿಗಳು ಈ ಆದೇಶ ಹೊರಡಿಸುತ್ತಿವೆ. ಜರ್ಮನಿ ಮೂಲದ ಬಿಎಂಡಬ್ಲ್ಯೂ, ಯುಎಸ್ ಮೂಲದ ಟೆಸ್ಲಾ, ಬ್ರಿಟನ್‌ನ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕೂಡ ತಮ್ಮ ಕಾರು ಉತ್ಪಾದನೆ ಘಟಕಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ವರದಿ ಮಾಡಿವೆ. ಇವು ಚೀನಾದಲ್ಲಿ ಕಾರು ಉತ್ಪಾದನೆ ಘಟಕಗಳನ್ನು ಹೊಂದಿದ್ದವು.
ಪೂರೈಕೆ ವ್ಯವಸ್ಥೆಗೂ ಪೆಟ್ಟು:
ಚೀನಾದಲ್ಲಿ ಹಲವು ವಿಧಗಳ ಕಂಪನಿಗಳು ಚಾಲ್ತಿಯಲ್ಲಿವೆ. ಕಾರುಗಳು, ಎಲೆಕ್ಟ್ರಾನಿಕ್ಸ್ ಮತ್ತು ಔದ್ಯಮಿಕ ಸಲಕರಣೆಗಳನ್ನು ಇಲ್ಲಿ ಉತ್ಪಾದನೆ ಮಾಡಿ ವಿದೇಶಗಳಿಗೆ ರವಾನೆ ಮಾಡಲಾಗುತ್ತಿತ್ತು. ಈ ಪೈಕಿ ಬಹುತೇಕ ಕಂಪನಿಗಳು ಮತ್ತು ಫ್ಯಾಕ್ಟರಿಗಳನ್ನು ಅಭಿವೃದ್ಧಿ ಹೊಂದಿದ ದೇಶಗಳೇ ಸ್ಥಾಪಿಸಿವೆ. ಈ ಪೈಕಿ, ಅಮೆರಿಕ, ಜರ್ಮನಿ, ಜಪಾನ್ ಮತ್ತು ಫ್ರಾನ್ಸ್ ಪ್ರಮುಖ ದೇಶಗಳು. ಇಂದು ಯಾವುದೇ ಉತ್ಪನ್ನ ಒಂದೇ ದೇಶದಲ್ಲಿ ತಯಾರಾಗುವುದಿಲ್ಲ. ಒಂದು ಇಡೀ ಉತ್ಪನ್ನದ ಒಂದು ಭಾಗ ಒಂದು ದೇಶದಲ್ಲಿ ತಯಾರಾದರೆ ಅದೇ ಉತ್ಪನ್ನದ ಇನ್ನೊಂದು ಬಿಡಿಭಾಗ ಇನ್ನೊಂದು ದೇಶದಲ್ಲಿ ತಯಾರಾಗಿರುತ್ತದೆ. ಅವುಗಳನ್ನು ಇನ್ಯಾವುದೋ ದೇಶದಲ್ಲಿ ಇರುವ ಘಟಕದಲ್ಲಿ ಜೋಡಿಸಿ ಮಾರಾಟ ಮಾಡಲಾಗುತ್ತದೆ. ಉದಾಹರಣೆಗೆ, ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಕ್ಯಾಮರಾಗಳನ್ನು ಒಂದು ದೇಶದಲ್ಲಿ ತಯಾರಿಸಲಾಗುತ್ತದೆ. ಇದೇ ಮೊಬೈಲ್‌ನ ಡಿಸ್‌ಪ್ಲೇ ಸ್ಕ್ರೀನ್‌ಗಳು ಇನ್ನೊಂದು ದೇಶದಲ್ಲಿ ಉತ್ಪಾದನೆಯಾಗುತ್ತವೆ. ಇದನ್ನೇ ನಾವು ಅಂತಾರಾಷ್ಟ್ರೀಯ ಪೂರೈಕೆ ಚೈನ್ ಎಂದು ಕರೆಯುತ್ತೇವೆ. ತೈವಾನ್, ದಕ್ಷಿಣ ಕೊರಿಯಾ, ವಿಯೆಟ್ನಾಮ್, ಬಾಂಗ್ಲಾದೇಶ ಮತ್ತು ಮಲೇಷ್ಯಾ ದೇಶಗಳು ಈ ಪೂರೈಕೆ ಸರಣಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಈ ಪೂರೈಕೆ ಸರಣಿಗೆ ಈಗ ಚೀನಾದಲ್ಲಿ ಹಬ್ಬುತ್ತಿರುವ ಕೊರೊನಾವೈರಸ್ ಬಾಧೆ ತಟ್ಟಿದೆ. ಹೀಗಾಗಿ ಚೀನಾದಿಂದ ರಫ್ತಾಗುತ್ತಿದ್ದ ಸಾಮಗ್ರಿಗಳು ಮತ್ತು ಚೀನಾಗೆ ಆಮದು ಆಗುತ್ತಿದ್ದ ಸಾಮಗ್ರಿಗಳಿಗೂ ಬಿಸಿ ತಟ್ಟಿದೆ. ಉದಾಹರಣೆಗೆ, ಬಟ್ಟೆ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಚೀನಾದಿಂದ ಜಪಾನ್‌ಗೆ ರಫ್ತು ಮಾಡಲಾಗುತ್ತಿತ್ತು. ಈಗ ಈ ವಿಭಾಗದಲ್ಲಿ ರಫ್ತು ನಡೆಯುತ್ತಿಲ್ಲ. ಇನ್ನು ಹುಂಡಾಯ್ ಮೋಟಾರು ಕಂಪನಿಯು ದಕ್ಷಿಣ ಕೊರಿಯಾದಲ್ಲಿನ ತನ್ನ ಕೆಲವು ಘಟಕಗಳನ್ನು ಮುಚ್ಚಬೇಕಾಗಿ ಬಂತು. ಯಾಕೆಂದರೆ ಚೀನಾದಿಂದ ಈ ಘಟಕಗಳಿಗೆ ವೈರಿಂಗ್ ಹಾರ್ನೆಸ್‌ಗಳು ಪೂರೈಕೆಯಾಗುತ್ತಿದ್ದವು. ಕೊರೊನಾ ವೈರಸ್‌ನಿಂದಾಗಿ ಈ ಪೂರೈಕೆ ಸ್ಥಗಿತಗೊಂಡಿದೆ.
ಏಷ್ಯಾದ ಹಲವು ದೇಶಗಳ ಜನರು ಮಾರುಕಟ್ಟೆಗಳಿಗೆ, ಶಾಪಿಂಗ್ ಮಾಲ್‌ಗಳಿಗೆ ಮತ್ತು ರೆಸ್ಟೋರೆಂಟ್‌ಗಳಿಗೆ ಹೋಗಲೂ ಹಿಂಜರಿಯುತ್ತಿದ್ದಾರೆ. ತಾವು ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿದರೆ ತಮಗೂ ಎಲ್ಲಿ ಕೊರೊನಾ ವೈರಸ್ ಸೋಂಕು ತಗುಲಿ ಬಿಟ್ಟೀತು ಎಂಬ ಭೀತಿ ಹುಟ್ಟಿಕೊಂಡಿದೆ. ಇದರಿಂದಾಗಿ ರಿಟೇಲ್ ಮಾರ್ಕೆಟ್‌ಗೆ ಬಾಧೆ ಶುರುವಾಗಿದೆ. ಕೊರೊನಾ ವೈರಸ್‌ನಿಂದ ಚೀನಾ ಸರ್ಕಾರವು ಸಂಪೂರ್ಣವಾಗಿ ಪ್ರವಾಸೋದ್ಯಮವನ್ನೇ ನಿಷೇಧಿಸಿಬಿಟ್ಟಿದೆ. ಇದರಿಂದಾಗಿ ಹಲವು ದೇಶಗಳು ಚೀನಾದ ಪ್ರವಾಸಿಗರನ್ನು ತಮ್ಮ ದೇಶದೊಳಕ್ಕೆ ಬಿಟ್ಟುಕೊಳ್ಳಲು ಒಪ್ಪುತ್ತಿಲ್ಲ. ಇದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಇದು ವಿಯೆಟ್ಮಾಮ್, ಥಾಯ್ಲೆಂಡ್ ಮತ್ತು ಸಿಂಗಾಪುರಕ್ಕೆ ಪ್ರವಾಸೋದ್ಯಮದ ಆದಾಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೊಡೆತ ನೀಡುತ್ತಿದೆ. ಯಾಕೆಂದರೆ ಚೀನಾದಿಂದಲೇ ಈ ದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದುಬರುತ್ತಿದ್ದರು. ಸಿಂಗಾಪುರ ಒಂದೇ ದೇಶಕ್ಕೆ 10 ಮಿಲಿಯನ್ ಪ್ರವಾಸಿಗರು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೊನಾ ವೈರಸ್ ದಾಳಿಯಿಂದ ಇವರು ಆಗಮಿಸದೇ ಆರ್ಥಿಕ ನಷ್ಟವನ್ನು ಸಿಂಗಪುರ ಎದುರಿಸಲಿದೆ. ಮಕಾವು ಮತ್ತು ಹಾಂಕಾಂಗ್‌ನಂತಹ ವಹಿವಾಟು ಕೇಂದ್ರಗಳಿಗಂತೂ ಇದು ಭಾರಿ ನಷ್ಟವನ್ನು ಉಂಟು ಮಾಡಲಿದೆ.
ಥಾಯ್ಲೆಂಡ್‌ನ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ. 11.2 ಆಗಿದ್ದರೆ, ಹಾಂಕಾಂಗ್‌ಗೆ ಇದು ಶೇ. 9.4 ಆಗಿದೆ. ಭಾರತ ಮತ್ತು ಇಂಡೋನೇಷ್ಯಾಗೆ ಚೀನಾದ ಪ್ರವಾಸಿಗರು ಆಗಮಿಸುವ ಸಂಖ್ಯೆ ಕಡಿಮೆ ಇರುವುದರಿಂದ, ಕೊರೊನಾ ವೈರಸ್‌ನಿಂದ ಈ ದೇಶಗಳಲ್ಲಿ ಪ್ರವಾಸೋದ್ಯಮದಿಂದ ಉಂಟಾಗುವ ಪರಿಣಾಮ ಕಡಿಮೆ ಎನ್ನಬಹುದು. ಇನ್ನೊಂದೆಡೆ ಹಲವು ದೇಶಗಳಲ್ಲಿ ವಿಮಾನಯಾನ ಸಂಸ್ಥೆಗಳು ಚೀನಾಗೆ ತೆರಳುವ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ ಅಥವಾ ಸಂಪೂರ್ಣ ಸ್ಥಗಿತಗೊಳಿಸಿವೆ. ಬ್ರಿಟಿಷ್ ಏರ್‌ವೇಸ್, ಲುಫ್ತಾನ್ಸಾ ಮತ್ತು ಏರ್ ಇಂಡಿಯಾಗೆ ಈ ಬಿಸಿ ತಟ್ಟಿದೆ. ಪ್ರವಾಸೋದ್ಯಮ ಮತ್ತು ವಿಮಾನಯಾನ ಸೌಲಭ್ಯದಲ್ಲಿ ಅಡ್ಡಿಯಾಗಿರುವುದರಿಂದ ಮುಂಬರುವ ಒಲಿಂಪಿಕ್ಸ್‌ಗೆ ಸಮಸ್ಯೆ ಉಂಟಾಗಲಿದೆ ಎಂದು ಜಪಾನ್ ಆತಂಕ ವ್ಯಕ್ತಪಡಿಸಿದೆ. ಸಮ್ಮರ್ ಒಲಿಂಪಿಕ್ಸ್ ಜುಲೈ 24 ರಿಂದ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿದೆ. ಕಾರುಗಳು, ಔದ್ಯಮಿಕ ಯಂತ್ರಗಳು, ಸಲಕರಣೆಗಳು, ಫಾರ್ಮಾ, ಗೃಹ ಬಳಕೆ ಸಲಕರಣೆಗಳು, ಕಂಪ್ಯೂಟರುಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಹೈಟೆಕ್ ಸಾಮಗ್ರಿಗಳು ಹಾಗೂ ಅವುಗಳ ಬಿಡಿಭಾಗಗಳನ್ನು ತಯಾರಿಸುವಲ್ಲಿ ಚೀನಾ ಒಂದು ಮಹತ್ವದ ಕೇಂದ್ರದ ರೀತಿ ಕೆಲಸ ಮಾಡುತ್ತದೆ. ಆದರೆ ಈಗ ಕೊರೊನಾಬಾಧೆಯಿಂದಾಗಿ, ಕಾರು ಉತ್ಪಾದನೆಯಲ್ಲಿ 2020ರ ಮೊದಲ ತ್ರೈಮಾಸಿಕದಲ್ಲೇ ಶೇ. 15 ರಷ್ಟು ಇಳಿಕೆ ಕಂಡುಬಂದಿದೆ. ಕಾರುಗಳ ಬಿಡಿಭಾಗಗಳ ತಯಾರಕ ಸಂಸ್ಥೆ ಬಾಷ್, ಮ್ಯಾಗ್ನಾ ಇಂಟರ್‌ನ್ಯಾಷನಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದಕ ಎನ್‌ವಿಡಿಯಾ ಹಾಗೂ ಇತರ ಕಂಪನಿಗಳು ತಮ್ಮ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಇಡೀ ಜಗತ್ತಿಗೆ ಕೊರೊನಾ ವೈರಸ್ ಬಾಧೆ ತಟ್ಟಿದೆ. ಈಗಾಗಲೇ ಆರ್ಥಿಕ ಹಿಂಜರಿತದಿಂದ ಬಾಧಿಸುತ್ತಿರುವ ವಿಶ್ವಕ್ಕೆ ಇದು ಮತ್ತೊಂದು ಆಘಾತವನ್ನು ನೀಡಿದೆ. ಇಡೀ ವಿಶ್ವದ ಜಿಡಿಪಿಯನ್ನು ಈ ವೈರಸ್ ಒಂದೇ ಇಳಿಕೆ ಮಾಡುವ ಸಾಧ್ಯತೆಯಿದೆ. ಚೀನಾದ ಜಿಡಿಪಿ ಕೂಡ ಇದರಿಂದಾಗಿ ಇಳಿಯುವುದಂತೂ ಖಚಿತ. ಚೀನಾಗೆ ಭಾರಿ ಯಂತ್ರಗಳನ್ನು ಪೂರೈಕೆ ಮಾಡುತ್ತಿದ್ದ ಜರ್ಮನಿಗೆ ಆರ್ಡರ್‌ಗಳು ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ.