ಹೈದರಾಬಾದ್:ಭಾರತ ಸೇರಿದಂತೆ ಪ್ರಪಂಚದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಕೇಸ್ ಹಾಗೂ ಸಾವಿನ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಆದರೆ ಫ್ರಾನ್ಸ್, ಇಂಗ್ಲೆಂಡ್ ದೇಶಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಎರಡನೇ ಬಾರಿ ಲಾಕ್ಡೌನ್ ಹೇರಲಾಗಿದೆ.
ವಿಶ್ವದಾದ್ಯಂತ ಬರೋಬ್ಬರಿ 4,53,21,659 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದ್ದು, 11,86,243 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 3,29,93,196 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಜಗತ್ತಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 92,12,767 ಇದ್ದು, ಮೃತರ ಸಂಖ್ಯೆ 2,34,177ಕ್ಕೆ ಏರಿಕೆಯಾಗಿದೆ.
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 80,88,046 ಕೇಸ್ಗಳು ಪತ್ತೆಯಾಗಿದ್ದು, 1,21,131 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 54,96,402 ಪ್ರಕರಣಗಳು ಹಾಗೂ 1,59,033 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 15,81,693 ಕೇಸ್ಗಳಿದ್ದು, 27,301 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಗ್ಲೋಬಲ್ ಕೋವಿಡ್ 19 ಟ್ರ್ಯಾಕರ್ ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮೆಕ್ಸಿಕೋ, ಐದನೇ ಸ್ಥಾನದಲ್ಲಿ ಇಂಗ್ಲೆಂಡ್ ಹಾಗೂ ಆರನೇ ಸ್ಥಾನದಲ್ಲಿ ಫ್ರಾನ್ಸ್ ಇದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 85,940 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.