ಮುಂಬೈ:18 ವರ್ಷದೊಳಗಿನ ಓಪನ್ ವಿಭಾಗದ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೆನ್ನೈ ಮೂಲದ 14 ವರ್ಷದ ಆರ್. ಪ್ರಜ್ಞಾನಂದ ಎಂಬ ಬಾಲಕ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾನೆ.
ಪ್ರಜ್ಞಾನಂದ ಚಿನ್ನದ ಪದಕ ಪಡೆಯಲು ವೇದಿಕೆಯತ್ತ ನಡೆದು ಬರುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನ ಅಧಿಕೃತ ಖಾತೆ, ಇದು ವಿಜೇತನ ನಡಿಗೆ' ಎಂದು ಟ್ವೀಟ್ ಮಾಡಿದೆ.
ಕೊನೆಯ ಸುತ್ತಿನಲ್ಲಿ ಜರ್ಮನಿಯ ವ್ಯಾಲೆಂಟಿನ್ ಬಕೆಲ್ಸ್ ವಿರುದ್ಧ ಆಕರ್ಷಕ ಮತ್ತು ಅಜೇಯ 9/11 ಅಂಕ ಗಳಿಸಿ, 2700 ಕ್ಕೂ ಹೆಚ್ಚಿನ ಪ್ರದರ್ಶನ ರೇಟಿಂಗ್ನೊಂದಿಗೆ ಆಟ ಮುಗಿಸಿದ ಪ್ರಜ್ಞಾನಂದ, ವಿಜೇತನಾಗಿ ಹೊರಹೊಮ್ಮಿದ್ದಾನೆ. ಒಟ್ಟಾರೆ ಒಂದು ಚಿನ್ನ, ಮೂರು ಬೆಳ್ಳಿ ಸೇರಿದಂತೆ 7 ಪದಕಗಳನ್ನು ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತನ್ನದಾಗಿಸಿಕೊಂಡಿತು.
ಚೆಸ್ ಡಾಟ್ ಕಾಮ್- ಇಂಡಿಯಾ ಟ್ವೀಟ್
ಬಾಲಕನಿಗೆ ಚೆಸ್.ಕಾಮ್-ಇಂಡಿಯಾ ಶುಭಕೋರಿದ್ದು, 'ಅದ್ಭುತ ಬಾಲಕನಿಗೆ ಹೃದಯಪೂರ್ವಕ ಅಭಿನಂದನೆಗಳು' ಎಂದು ಹಾರೈಸಿ ಟ್ವೀಟ್ ಮಾಡಿದೆ.