ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ದೃಷ್ಟಿ ದಿನ: ನಿಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಇರಲಿ - World Health Organisation

ಜ್ಞಾನೇಂದ್ರಿಯಗಳಲ್ಲಿ ಕಣ್ಣು ಕೂಡಾ ಒಂದು. ಬಣ್ಣ, ವಸ್ತು, ಗಾತ್ರ, ಸೌಂದರ್ಯ ಎಲ್ಲವನ್ನೂ ಗುರುತಿಸುವ ಕಣ್ಣು ಪ್ರತಿಯೊಬ್ಬರ ಪ್ರಮುಖ ಅಂಗ. ದೃಷ್ಟಿ ಕಳೆದುಕೊಂಡರೆ ಇಡೀ ಪ್ರಪಂಚವೇ ಕತ್ತಲಿನ ಅನುಭವ. ಅಂಧತ್ವ ಅನ್ನುವುದು ಹುಟ್ಟಿನಿಂದಲೇ ಬಂದಿರಬಹುದು ಅಥವಾ ಇನ್ಯಾವುದೋ ಕಾರಣದಿಂದ ದೃಷ್ಟಿ ಹೀನರಾಗಬಹುದು, ದೃಷ್ಟಿಗೆ ಸಂಬಂಧಿಸಿದ ಕಾಯಿಲೆಗೆ ಒಳಗಾಗಬಹುದು. ಅಂಧತ್ವ, ದೃಷ್ಟಿ ಗೋಚರ ದುರ್ಬಲತೆ ಮತ್ತು ಪರಿಹಾರದ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ.

ಇಂದು ವಿಶ್ವ ದೃಷ್ಟಿ ದಿನ
ಇಂದು ವಿಶ್ವ ದೃಷ್ಟಿ ದಿನ

By

Published : Oct 8, 2020, 6:00 AM IST

ಸೌಂದರ್ಯವೆಂಬುದು ನೋಡುಗನ ದೃಷ್ಟಿಯಲ್ಲಿದೆ ಎಂಬ ಮಾತಿದೆ. ಆದ್ರೆ ದುರಾದೃಷ್ಟವಶಾತ್​​ ಇಂದು ಅನೇಕ ಜನರು ಕುರುಡುತನ ಅಥವಾ ದೃಷ್ಟಿಹೀನರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ - ಕುರುಡುತನ ಮತ್ತು ದೃಷ್ಟಿಹೀನತೆಯೂ ವಿಶ್ವದಾದ್ಯಂತ ಕನಿಷ್ಠ 2.2 ಬಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಅದರಲ್ಲಿ 1 ಬಿಲಿಯನ್ ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ.

ನಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ ಎರಡನೇ ಗುರುವಾರ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ದೃಷ್ಟಿ ದೋಷದಿಂದ ಬಳಲುತ್ತಿರುವ ಜನರ ಕಡೆಗೆ ದೇಶಾದ್ಯಂತದ ಜನರ ಗಮನವನ್ನು ಸೆಳೆಯುವ ಸಲುವಾಗಿ ಈ ದಿನ ಆಚರಿಸಲಾಗುತ್ತದೆ. ಈ ವರ್ಷ ಇದನ್ನು ಅಕ್ಟೋಬರ್ 8 ರಂದು ‘ಹೋಪ್ ಇನ್ ದೃಷ್ಟಿ’ಎಂಬ ವಿಷಯದೊಂದಿಗೆ ಆಚರಿಸಲಾಗುತ್ತಿದೆ.

ದೃಷ್ಟಿ ಹೀನತೆಗೆ ಕಾರಣವೇನು?

ಮಧುಮೇಹ ಮತ್ತು ಟ್ರಾಕೋಮಾ, ಕಣ್ಣುಗಳಿಗೆ ಪೆಟ್ಟಾದಾಗ, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆ ಸೇರಿದಂತೆ ಹಲವಾರು ಅಂಶಗಳಿಂದ ದೃಷ್ಟಿ ಹೀನತೆ ಉಂಟಾಗಬಹುದೆಂದು ಡಬ್ಲ್ಯುಎಚ್‌ಒ ಹೇಳುತ್ತದೆ. ದೃಷ್ಟಿಹೀನತೆ ಹೊಂದಿರುವ ಹೆಚ್ಚಿನ ಜನರು 50 ವರ್ಷಕ್ಕಿಂತ ಮೇಲ್ಪಟ್ಟವರು. ಆದಾಗ್ಯೂ ದೃಷ್ಟಿ ಹೀನತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಿದೆ.

ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ (ಎನ್‌ಎಚ್‌ಪಿ) ಪ್ರಕಾರ ದೃಷ್ಟಿ ಹೀನತೆಗೆ ಇತರ ಕಾರಣಗಳು:

  • ಸ್ಟ್ರಾಬಿಸ್ಮಿಕ್ ಆಂಬ್ಲಿಯೋಪಿಯಾ
  • ಗ್ಲುಕೋಮಾ
  • ರೆಟಿನಲ್ ಬೇರ್ಪಡುವಿಕೆ
  • ರೆಟಿನೈಟಿಸ್ ಪಿಗ್ಮೆಂಟೋಸಾ
  • ಪ್ರಿಮೆಚುರಿಟಿಯ ರೆಟಿನೋಪತಿ
  • ಆಪ್ಟಿಕ್ ಕ್ಷೀಣತೆಯಂತಹ ಆಪ್ಟಿಕ್ ನರ ರೋಗಗಳು
  • ಹೆರೆಡೋಮ್ಯಾಕ್ಯುಲರ್ ಡಿಜೆನರೇಶನ್ (ಸ್ಟಾರ್‌ಗಾರ್ಡ್ಸ್ ಕಾಯಿಲೆ)
  • ಆಲ್ಬಿನಿಸಂ
  • ನಿಸ್ಟಾಗ್ಮಸ್
  • ಬ್ರೈನ್​ ಡ್ಯಾಮೇಜ್​

ಆರೋಗ್ಯಕರ ಕಣ್ಣುಗಳಿಗೆ ಸಲಹೆಗಳು:

ಚೆನ್ನಾಗಿ ತಿನ್ನಿರಿ: ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳು ಬಳಸಿ ಜೊತೆಗೆ ಹಳದಿ ಮತ್ತು ಕೆಂಪು ಹಣ್ಣುಗಳನ್ನು ಸೇವಿಸಿ.

ಧೂಮಪಾನ ಮಾಡಬೇಡಿ: ಕಣ್ಣಿನ ಪೊರೆ, ಆಪ್ಟಿಕ್ ನರ ಹಾನಿ ಮತ್ತು ಮ್ಯಾಕ್ಯುಲರ್ ಕ್ಷೀಣತೆಗೆ ಧೂಮಪಾನ ಅಪಾಯಕಾರಿ ಅಂಶವಾಗಿದೆ.

ನೇರಳಾತೀತ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸನ್​ಗ್ಲಾಸ್​​ ಧರಿಸಿ.

ಅಪಾಯಕಾರಿ ಕೆಲಸದ ಸಮಯದಲ್ಲಿ ಸುರಕ್ಷತಾ ಕನ್ನಡಕ ಅಥವಾ ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ.

ಕಂಪ್ಯೂಟರ್​ನನ್ನು ದೂರದಿಂದ ನೋಡಿ: ಪ್ರತಿ 20 ನಿಮಿಷಕ್ಕೆ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ಕೊಡಿ, 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿ ನೋಡಿ.

ಸರಿಯಾದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ: ನಿಮ್ಮ ಕಣ್ಣುಗಳನ್ನು ಉಜ್ಜುವ ಮೊದಲು ಅಥವಾ ನಿಮ್ಮ ಕಣ್ಣುಗಳನ್ನು ಮುಟ್ಟುವ ಮೊದಲು ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ.

ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿ.

ಕಣ್ಣಿನ ಸೋಂಕುಗಳಿಗೆ ಓವರ್-ದಿ-ಕೌಂಟರ್ (ಒಟಿಸಿ) ಔಷಧಿ ಬಳಸುವುದನ್ನು ತಪ್ಪಿಸಿ.

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸದೃಢವಾಗಿರುವುದಲ್ಲದೇ, ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸುತ್ತದೆ.

ಉತ್ತಮ ದೃಷ್ಟಿಗೆ ಈ 8 ಆಹಾರಗಳನ್ನು ಸೇವಿಸಿ:

  • ಮೊಟ್ಟೆ
  • ಬಾದಾಮಿ
  • ಕ್ಯಾರೆಟ್
  • ಕಿತ್ತಳೆ
  • ಮೀನು
  • ಹಸಿರು ತರಕಾರಿಗಳು
  • ಸೂರ್ಯಕಾಂತಿ ಬೀಜಗಳು
  • ದ್ವಿದಳ ಧಾನ್ಯಗಳು ಮತ್ತು ಬೀನ್ಸ್

ನಾವು ಈಗ ಸ್ವಲ್ಪ ಸಮಯದವರೆಗೆ ಕೋವಿಡ್​-19 ಸಾಂಕ್ರಾಮಿಕ ರೋಗದೊಂದಿಗೆ ವಾಸಿಸುತ್ತಿದ್ದೇವೆ. ವೈರಸ್ ಸಹ ಕಣ್ಣುಗಳ ಮೂಲಕ ಹರಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ ಜನರು ಹೆಚ್ಚು ಜಾಗರೂಕರಾಗಿರಬೇಕು. ಸೋಂಕಿತ ವ್ಯಕ್ತಿಯ ಕೆಮ್ಮು, ಸೀನು ಇತ್ಯಾದಿಗಳಿಂದ ಗಾಳಿಯಲ್ಲಿ ಬಿಡುಗಡೆಯಾಗುವ ಹನಿಗಳು ಇನ್ನೊಬ್ಬ ವ್ಯಕ್ತಿಯ ದೇಹವನ್ನು ಬಾಯಿ, ಮೂಗು ಮತ್ತು ಕಣ್ಣುಗಳ ಮೂಲಕ ಪ್ರವೇಶಿಸಬಹುದು. ಆದ್ದರಿಂದ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ.

ಕಿಕ್ಕಿರಿದ ಸ್ಥಳಕ್ಕೆ ಭೇಟಿ ನೀಡಿದಾಗ ಕಣ್ಣಿಗೆ ಕನ್ನಡಕ ಧರಿಸುವುದು ಉತ್ತಮ.

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಲು ಆದ್ಯತೆ ನೀಡುವ ವ್ಯಕ್ತಿಗಳು ಸ್ವಲ್ಪ ಸಮಯದ ನಂತರ ಕನ್ನಡಕ ಬದಲಾಯಿಸುವುದು ಒಳ್ಳೆಯದು.

ನಿಮ್ಮ ಕೈಗಳನ್ನು ತೊಳೆಯದೆ ನಿಮ್ಮ ಕಣ್ಣುಗಳನ್ನು ಉಜ್ಜುವುದು ಅಥವಾ ಸ್ಪರ್ಶಿಸುವುದನ್ನು ತಪ್ಪಿಸಿ.

ನೀವು ಕಣ್ಣಿಗೆ ಔಷಧಿಯನ್ನು ಬಳಸುತ್ತಿದ್ದರೇ ಬಿಟ್ಟುಬಿಡಬೇಡಿ.

ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸಬಾರದು ಮತ್ತು ಜನರು ನಿಯಮಿತವಾಗಿ ಕಣ್ಣಿನ ತಪಾಸಣೆಗೆ ಹೋಗಬೇಕು. ಮೇಲಾಗಿ 6 ​​ತಿಂಗಳಿಗೊಮ್ಮೆ ಅಲ್ಲದೇ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಅಭ್ಯಾಸವು ನಿಮ್ಮ ದೃಷ್ಟಿ ಕಳೆದುಕೊಳ್ಳದಂತೆ ತಡೆಯುತ್ತದೆ.

ವಯಸ್ಸಾದ ಮೇಲೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ ಅನ್ನುವ ನಂಬಿಕೆಯಿಂದ ಹೊರಬನ್ನಿ. ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ಸಮಸ್ಯೆ ಉಂಟಾಗಬಹುದು. ಹೆರಿಗೆ ಸಮಯದಲ್ಲಿ ಏನಾದರೂ ಸೋಂಕು ಮಗುವಿಗೆ ತಗುಲಬಹುದು. ಅನಂತರ ಎದೆ ಹಾಲು ಕುಡಿಯುವುದನ್ನು ನಿಲ್ಲಿಸಿ ಅನ್ಯ ಆಹಾರ ನೀಡುವ ಸಂದರ್ಭದಲ್ಲಿ ವಿಟಮಿನ್ ಎ ಕೊರತೆ ಉಂಟಾಗಿ ಮಗುವಿನಲ್ಲಿ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಕಣ್ಣಿನ ಪರೀಕ್ಷೆ ವಯಸ್ಸಾದ ಮೇಲೆ ಅನ್ನುವ ನಿರ್ಲಕ್ಷ್ಯ ಬಿಟ್ಟು ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.

ABOUT THE AUTHOR

...view details