"ಖಡ್ಗಮೃಗವನ್ನು ಉಳಿಸುವ ಏಕೈಕ ಮಾರ್ಗವೆಂದರೆ ಅದು ವಾಸಿಸುವ ಪರಿಸರವನ್ನು ಉಳಿಸುವುದು. ಏಕೆಂದರೆ ಅದರ ನಡುವೆ ಪ್ರಾಣಿಗಳ ಮತ್ತು ಸಸ್ಯಗಳ ಲಕ್ಷಾಂತರ ಇತರ ಜಾತಿಗಳ ನಡುವೆ ಪರಸ್ಪರ ಅವಲಂಬನೆ ಇದೆ." ಎಂದು ಡೇವಿಡ್ ಅಟೆನ್ಬರೋ ಹೇಳಿದ್ದಾರೆ.
ವಿಶ್ವದ ಐದು ಖಡ್ಗಮೃಗದ ಪ್ರಭೇದಗಳನ್ನು ಕಾಪಾಡಲು ಮತ್ತು ಅವು ಎದುರಿಸುತ್ತಿರುವ ಸವಾಲುಗಳನ್ನು ಪ್ರತಿಬಿಂಬಿಸಲು ಪ್ರತಿ ವರ್ಷ ಸೆಪ್ಟೆಂಬರ್ 22ರಂದು ವಿಶ್ವ ಖಡ್ಗಮೃಗ ದಿನವನ್ನು ಆಚರಿಸಲಾಗುತ್ತದೆ. ಸಂಬಂಧಿತ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆ (ಎನ್‌ಜಿಒ), ಮೃಗಾಲಯಗಳು ಮತ್ತು ಸಾರ್ವಜನಿಕರು ಖಡ್ಗಮೃಗ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಆಫ್ರಿಕಾ ಮತ್ತು ಏಷ್ಯಾದಲ್ಲಿ ವಾಸಿಸುವ ಐದು ಖಡ್ಗಮೃಗ ಜಾತಿಗಳಲ್ಲಿ, ಮೂರು ತಳಿಯು ಅಳಿವಿನಂಚಿನಲ್ಲಿವೆ ಎಂದು ಐಯುಸಿಎನ್ ವರದಿ ಹೇಳಿದೆ. ಅವುಗಳೆಂದರೆ, ಜವಾನ್ ಖಡ್ಗಮೃಗಗಳು (ಸೊಂಡೈಕಸ್ ಖಡ್ಗಮೃಗ), ಸುಮಾತ್ರನ್ ಖಡ್ಗಮೃಗಗಳು (ಡೈಸೆರೊಹಿನಸ್ ಸುಮಾಟ್ರೆನ್ಸಿಸ್) ಮತ್ತು ಕಪ್ಪು ಖಡ್ಗಮೃಗಗಳು (ಡೈಸೆರೋಸ್ ಬೈಕಾರ್ನಿಸ್). ಇನ್ನು ಬಿಳಿ ಖಡ್ಗಮೃಗ(ಸೆರಾಟೋಥೆರಿಯಮ್ ಸಿಮಮ್)ಗಳು ಅಳಿವಿನ ಭೀತಿಯಲ್ಲಿವೆ. ಇನ್ನು ಒಂದು ಕೊಂಬಿನ ಖಡ್ಗಮೃಗಗಳು (ಯೂನಿಕಾರ್ನಿಸ್ ಖಡ್ಗಮೃಗ) ಅಳಿವಿನಂಚನ್ನು ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವಿಶ್ವ ಖಡ್ಗಮೃಗ ದಿನದ ಇತಿಹಾಸ:
2010ರಲ್ಲಿ ಖಡ್ಗಮೃಗದ ಕುರಿತು ಪ್ರಪಂಚದಾದ್ಯಂತ ಜನರಿಗೆ ತಿಳಿದಿಲ್ಲ ಎಂಬುದು ಸ್ಪಷ್ಟವಾಯಿತು. ಈ ಹಿನ್ನೆಲೆಯಲ್ಲಿ 30,000 ಖಡ್ಗಮೃಗ ಜಾತಿಗಳ ಉಳಿವು ಮತ್ತು ಜನರು ಅದರ ಬಗ್ಗೆ ತಿಳಿದುಕೊಳ್ಳಲು ಡಬ್ಲ್ಯೂಡಬ್ಲ್ಯೂಎಫ್ ದಕ್ಷಿಣ ಆಫ್ರಿಕಾ ಸಂಸ್ಥೆಯು 'ವಿಶ್ವ ಖಡ್ಗಮೃಗ ದಿನ'ವನ್ನು ಘೋಷಿಸಿತು. ಈ ಪ್ರಯತ್ನವು ಅಭೂತಪೂರ್ವ ಯಶಸ್ಸನ್ನು ಗಳಿಸಿತು. ವಿಶ್ವ ಖಡ್ಗಮೃಗ ದಿನವು ಖಡ್ಗ ಮೃಗಗಳನ್ನು ಕಾಪಾಡುವ, ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ, ಖಡ್ಗಮೃಗಗಳನ್ನು ಬೇಟೆಯಾಡುವುದರಿಂದ ಮತ್ತು ನಗರೀಕರಣದಿಂದ ಅವು ಅಳಿವಿನ ಭೀತಿಯಲ್ಲಿವೆ.
ವಿಶ್ವ ಖಡ್ಗಮೃಗ ದಿನ ಆಚರಣೆ ಹೇಗೆ:ವಿಶ್ವ ಖಡ್ಗಮೃಗದ ದಿನವನ್ನು ಆಚರಿಸುವುದು ಹೇಗೆ ಎಂಬುದು, ನಮ್ಮ ಆಧುನಿಕ ಜಗತ್ತಿನಲ್ಲಿ ಖಡ್ಗಮೃಗಗಳ ದುಃಸ್ಥಿತಿಯ ಬಗ್ಗೆ ಶಿಕ್ಷಣ ನೀಡುವುದರ ಮೂಲಕ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲದೆ, ಉಳಿದಿರುವ ಖಡ್ಗಮೃಗ ಜಾತಿಗಳನ್ನು ಉಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸುವ ಮೂಲಕ ಆಚರಿಸಬಹುದು. ಖಡ್ಗಮೃಗಗಳು ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯ ಸಂಕೇತ. ಈ ಜೀವಿಗಳು ಪ್ರಪಂಚದಿಂದ ಕಣ್ಮರೆಯಾಗಲು ಅವಕಾಶ ನೀಡಬಾರದು. ಹೀಗೆ ವಿಶ್ವ ಖಡ್ಗಮೃಗ ದಿನ ಆಚರಣೆ ಮಾಡಬಹುದು.
ಚೀನಾ ಸರ್ಕಾರ, ಖಡ್ಗಮೃಗದ ಮೂಳೆಗಳನ್ನು ವೈದ್ಯಕೀಯ ಕ್ಷೇತ್ರ ಮತ್ತು ಸಾಂಸ್ಕೃತಿಕ ಉದ್ದೇಶಗಳಿಗೆ ಬಳಸುವುದನ್ನು ನಿಯಂತ್ರಣ ಮಾಡಲಾಗಿದೆ ಎಂದು ಅಕ್ಟೋಬರ್ 29, 2018ರಂದು ಘೋಷಿಸಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಸಾಕು ಖಡ್ಗಮೃಗದ ಕೊಂಬು ಮತ್ತು ಹುಲಿ ಮೂಳೆಯನ್ನು ಬಳಸಬಹುದು ಎಂದು ಘೋಷಿಸಿತು. ಡಿಸೆಂಬರ್ 22, 2018ರಂದು, ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೀಕರ ಸುನಾಮಿ ಅಪ್ಪಳಿಸಿತು. ಈ ಸುನಾಮಿಯಲ್ಲಿ ಸುಮಾರು 5 ಮೀಟರ್ (16 ಅಡಿ) ಎತ್ತರದವರೆಗೆ ಅಲೆಗಳು ಸೃಷ್ಟಿಯಾದವು. ಈ ಸುನಾಮಿಯು ಕೆಲವು ಖಡ್ಗಮೃಗಗಳು ಉಳಿದಿದಿದ್ದ ಏಕೈಕ ಆವಾಸಸ್ಥಾನವಾದ ಉಜುಂಗ್ ಕುಲೋನ್ ರಾಷ್ಟ್ರೀಯ ಉದ್ಯಾನಕ್ಕೆ ಬಂದು ಅಪ್ಪಳಿಸಿತು.