ಕರ್ನಾಟಕ

karnataka

ETV Bharat / bharat

ವಿಶ್ವ ವಲಸೆ ಹಕ್ಕಿಗಳ ದಿನಾಚರಣೆ ಇಂದು; ವಲಸೆ ಹಕ್ಕಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ - ಆಮುರ್ ಫಾಲ್ಕನ್

ವಲಸೆ ಹೋಗುವ ಹಕ್ಕಿಗಳು ಪ್ರಕೃತಿದತ್ತವಾಗಿ ಸಾವಿರಾರು ಕಿಮೀ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಬಹುತೇಕ ವಲಸೆ ಪ್ರಯಾಣಗಳು ಬಹುದೂರದ ಗುರಿಯಾಗಿದ್ದರೂ, ಎಷ್ಟೇ ಬಳಲಿಕೆಯಾದರೂ ಅದನ್ನೆಲ್ಲ ಮೆಟ್ಟಿ ಹಕ್ಕಿಗಳು ತಮ್ಮ ಗುರಿಯನ್ನು ತಲುಪುತ್ತವೆ. ರೆಡ್​ ನಾಟ್​ ಎಂಬ ಹೆಸರಿನ ಮಧ್ಯಮ ಗಾತ್ರದ ಪಕ್ಷಿಯು ವರ್ಷಕ್ಕೆ ಎರಡು ಬಾರಿ ಸುಮಾರು 16 ಸಾವಿರ ಕಿಮೀ ಪಯಣಿಸುವ ಮೂಲಕ ಅತಿ ಹೆಚ್ಚು ದೂರ ಸಾಗುವ ಪಕ್ಷಿ ಎಂಬ ಖ್ಯಾತಿಯನ್ನು ಪಡೆದಿದೆ.

World Migratory Bird Day 2020
World Migratory Bird Day 2020

By

Published : Oct 10, 2020, 4:51 PM IST

ಋತುಮಾನಕ್ಕನುಗುಣವಾಗಿ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವ ಪಕ್ಷಿ ಸಂಕುಲ ಹಾಗೂ ಅವುಗಳ ವಾಸಸ್ಥಾನಗಳ ರಕ್ಷಣೆಗಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್​ 10 ರಂದು ವಿಶ್ವ ವಲಸೆ ಹಕ್ಕಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಇಂದಿನ ದಿನ ಪಕ್ಷಿಗಳ ರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಲಸೆ ಹಕ್ಕಿಗಳಿಗೆ ಎದುರಾಗುತ್ತಿರುವ ಅಪಾಯ, ಪರಿಸರ ಸಮತೋಲನದಲ್ಲಿ ವಲಸೆ ಹಕ್ಕಿಗಳ ಪಾತ್ರ ಹಾಗೂ ವಲಸೆ ಹಕ್ಕಿಗಳನ್ನು ಸಂರಕ್ಷಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಅವಲೋಕಿಸಲು ಇಂದಿನ ದಿನ ಮುಡುಪಾಗಿದೆ.

ಪ್ರತಿವರ್ಷದ ಈ ದಿನದಂದು ಅನೇಕ ಕಡೆಗಳಲ್ಲಿ ಪಕ್ಷಿ ಹಬ್ಬ, ವಲಸೆ ಹಕ್ಕಿಗಳ ಕುರಿತಾದ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪಕ್ಷಿ ವೀಕ್ಷಣೆ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆದರೆ ಈ ಎಲ್ಲ ಚಟುವಟಿಕೆಗಳು ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಆಚರಣೆ ಸಾಂಕೇತಿಕ ಮಾತ್ರವಾಗಿದ್ದು, ವಲಸೆ ಹಕ್ಕಿಗಳ ರಕ್ಷಣೆಗಾಗಿ ಮಾನವ ಕುಲವು ಅಹರ್ನಿಶಿ ಶ್ರಮಿಸುವುದು ಅತ್ಯಂತ ಅಗತ್ಯವಾಗಿದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಹಕ್ಕಿಗಳು ವಲಸೆ ಬರುವ ಹಾಗೂ ಅಲ್ಲಿಂದ ತೆರಳುವ ಋತುಮಾನಗಳು ವಿಭಿನ್ನವಾಗಿರುವುದರಿಂದ ಅದಕ್ಕೆ ತಕ್ಕಂತೆ ವಲಸೆ ಹಕ್ಕಿಗಳ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೂ ಪ್ರತಿವರ್ಷ ಮೇ ತಿಂಗಳು ಹಾಗೂ ಅಕ್ಟೋಬರ್ ತಿಂಗಳಿನ ಎರಡನೇ ಶನಿವಾರಗಳನ್ನು ವಲಸೆ ಹಕ್ಕಿಗಳ ರಕ್ಷಣೆಯ ಜಾಗೃತಿಗಾಗಿ ಮೀಸಲಿಡಲಾಗಿದೆ.

ಹಕ್ಕಿಗಳ ವಲಸೆಗೆ ಕಾರಣವೇನು?

ಹಕ್ಕಿಗಳ ವಲಸೆ ಪ್ರಕ್ರಿಯೆಯು ಪ್ರಕೃತಿಯ ಅದ್ಭುತಗಳಲ್ಲೊಂದಾಗಿದೆ. ಋತುಮಾನಗಳು ಬದಲಾದಂತೆ ಆಹಾರ ಅರಸುತ್ತ, ಸಂತಾನೋತ್ಪತ್ತಿಗಾಗಿ ಹಾಗೂ ಮರಿಗಳ ಪಾಲನೆ ಪೋಷಣೆಗಾಗಿ ಹಕ್ಕಿಗಳು ನೂರಾರು, ಸಾವಿರಾರು ಕಿಮೀ ಪಯಣಿಸುವುದು ಸೋಜಿಗವೇ ಸರಿ. ಪ್ರಕೃತಿಯ ವೈಪರೀತ್ಯದಿಂದ ತಾವಿರುವ ಸ್ಥಳದಲ್ಲಿ ಸಂತಾನೋತ್ಪತ್ತಿ ಕಾರ್ಯ ಸಾಧ್ಯವಾಗದ ಪರಿಸ್ಥಿತಿಗಳಲ್ಲಿ ಹಕ್ಕಿಗಳು ಸಾವಿರಾರು ಕಿಮೀ ಪಯಣಿಸಿ ಸೂಕ್ತ ಸ್ಥಳದಲ್ಲಿ ಬೀಡು ಬಿಡುತ್ತವೆ.

ಜಾಗತಿಕವಾಗಿ ಅವಲೋಕಿಸಿದಲ್ಲಿ ಪಕ್ಷಿಗಳು ಭೂಮಿಯ ಉತ್ತರ ಭಾಗದಿಂದ ಶೀತ ವಾತಾವರಣದ ದಕ್ಷಿಣ ಭಾಗಗಳಿಗೆ ವಲಸೆ ಹೋಗುವುದು ಕಂಡು ಬರುತ್ತದೆ. ಆದರೂ ಕೆಲ ಪಕ್ಷಿಗಳು ಆಫ್ರಿಕಾದ ದಕ್ಷಿಣ ಭಾಗದಲ್ಲಿ ಮರಿಹಾಕಿ ಅಲ್ಲಿಂದ ಉತ್ತರ ಭಾಗದ ಶೀತ ಸ್ಥಳಗಳಿಗೆ ತೆರಳುತ್ತವೆ. ಇನ್ನು ಚಳಿಗಾಲದಲ್ಲಿ ಸಮುದ್ರ ದಂಡೆಯಲ್ಲಿ ವಾಸಿಸುವ ಕೆಲ ಪಕ್ಷಿಗಳು ಬೇಸಿಗೆಯಲ್ಲಿ ಬೆಟ್ಟ ಹತ್ತಿ ಹೋಗುತ್ತವೆ. ವಲಸೆ ಹೋಗುವ ಹಕ್ಕಿಗಳು ಪ್ರಕೃತಿದತ್ತವಾಗಿ ಸಾವಿರಾರು ಕಿಮೀ ಹಾರುವ ಸಾಮರ್ಥ್ಯವನ್ನು ಹೊಂದಿವೆ. ಬಹುತೇಕ ವಲಸೆ ಪ್ರಯಾಣಗಳು ಬಹುದೂರದ ಗುರಿಯಾಗಿದ್ದರೂ, ಎಷ್ಟೇ ಬಳಲಿಕೆಯಾದರೂ ಅದನ್ನೆಲ್ಲ ಮೆಟ್ಟಿ ಹಕ್ಕಿಗಳು ತಮ್ಮ ಗುರಿಯನ್ನು ತಲುಪುತ್ತವೆ.

ರೆಡ್​ ನಾಟ್​ ಎಂಬ ಹೆಸರಿನ ಮಧ್ಯಮ ಗಾತ್ರದ ಪಕ್ಷಿಯು ವರ್ಷಕ್ಕೆ ಎರಡು ಬಾರಿ ಸುಮಾರು 16 ಸಾವಿರ ಕಿಮೀ ಪಯಣಿಸುವ ಮೂಲಕ ಅತಿ ಹೆಚ್ಚು ದೂರ ಸಾಗುವ ಪಕ್ಷಿ ಎಂಬ ಖ್ಯಾತಿಯನ್ನು ಪಡೆದಿದೆ.

ವಿಶ್ವ ವಲಸೆ ಹಕ್ಕಿಗಳ ದಿನಾಚರಣೆಯ ಇತಿಹಾಸ

ವಿಶ್ವ ವಲಸೆ ಹಕ್ಕಿಗಳ ದಿನಾಚರಣೆಯನ್ನು 2006 ರಲ್ಲಿ ಆರಂಭಿಸಲಾಯಿತು. ಕನ್ಸರ್ವೇಶನ್ ಆಫ್ ಮೈಗ್ರೇಟರಿ ಸ್ಪೀಶಿಸ್​ ಆಫ್ ವೈಲ್ಡ್​ ಎನಿಮಲ್ಸ್​ ಸಹಯೋಗದಲ್ಲಿ ಕನ್ಸರ್ವೇಶನ್ ಆಫ್​ ಆಫ್ರಿಕನ್​-ಯುರೇಶಿಯನ್​ ಮೈಗ್ರೇಟರಿ ವಾಟರ್​ಬರ್ಡ್ಸ್​ ಸಂಸ್ಥೆಯು ಪ್ರಥಮ ಬಾರಿಗೆ ಈ ದಿನಾಚರಣೆಯನ್ನು ಆರಂಭಿಸಿತ್ತು.

ವಲಸೆ ಹಕ್ಕಿಗಳ ಕುರಿತಾದ ರೋಚಕ ವಿಷಯಗಳು

* ವಿಶ್ವದ ಸುಮಾರು 4 ಸಾವಿರ ಪ್ರಬೇಧದ ಹಕ್ಕಿಗಳು ನಿಯಮಿತವಾಗಿ ವಲಸೆ ಹೋಗುತ್ತವೆ. ಅಂದರೆ ಭೂಮಿಯ ಮೇಲಿರುವ ಒಟ್ಟು ಪಕ್ಷಿ ಸಂಕುಲದ ಶೇ 40 ರಷ್ಟು ಪಕ್ಷಿಗಳು ವಲಸೆ ಹೋಗುತ್ತವೆ.

* ಅತಿ ಹೆಚ್ಚುದೂರ ಪಯಣಿಸುವ ಪಕ್ಷಿಗಳು ಭೂಮಿಯ ಆರ್ಕಟಿಕ್​ ಭೂಪ್ರದೇಶದಲ್ಲಿದ್ದು, ಇವು ಪ್ರತಿವರ್ಷ ಸುಮಾರು 49 ಸಾವಿರ ಮೈಲುಗಳಷ್ಟು ಪಯಣಿಸಬಲ್ಲವು.

* ಗ್ರೇಟ್​ ಸ್ನೈಪ್ ಎಂಬ ಹೆಸರಿನ ಪಕ್ಷಿಯು 60 ಕಿಮೀ ವೇಗದಲ್ಲಿ 4200 ಮೈಲುಗಳಷ್ಟು ದೂರ ಸಾಗುವ ಸಾಮರ್ಥ್ಯ ಹೊಂದಿದ್ದು, ಇದು ಅತಿ ವೇಗವಾಗಿ ಸಾಗುವ ಪಕ್ಷಿ ಎಂದು ಹೆಸರು ಪಡೆದಿದೆ.

ಭಾರತದಲ್ಲಿ ಕಂಡುಬರುವ ವಲಸೆ ಹಕ್ಕಿಗಳು

- ಸೈಬೀರಿಯನ್ ಕ್ರೇನ್ಸ್​: ಭರತ್​ಪುರ

- ಆಮುರ್ ಫಾಲ್ಕನ್​: ಚಳಿಗಾಲದಲ್ಲಿ ನಾಗಾಲ್ಯಾಂಡ್​ನ ಡೋಯಾಂಗ್​ ಲೇಕ್​ ಬಳಿ ಕಂಡು ಬರುತ್ತವೆ.

- ಡೆಮೊಸೆಲ್ಲೆ ಕ್ರೇನ್ಸ್​: ರಾಜಸ್ಥಾನದ ಮರುಭೂಮಿಯಲ್ಲಿ ಕಾಣಿಸುತ್ತವೆ.

- ಬ್ಲ್ಯಾಕ್ ವಿಂಗ್ಡ್​ ಸ್ಟಿಲ್ಟ್​: ಗುಜರಾತ್, ಬಸಾಯ್, ಪುಣೆ

- ರೋಸಿ ಸ್ಟಾರ್ಲಿಂಗ್​: ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳಲ್ಲಿ ಕಾಣಿಸುತ್ತವೆ.

- ಗ್ರೇಟ್ ವೈಟ್​ ಪೆಲಿಕನ್​: ಅಸೋಂ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್​.

- ಗ್ರೇಟರ್​ ಫ್ಲೆಮಿಂಗೊ: ನಾಲ್ ಸರೋವರ ಪಕ್ಷಿಧಾಮ, ಖಿಜಾಡಿಯಾ ಪಕ್ಷಿಧಾಮ, ಗುಜರಾತಿನ ಥೋಲ್​ ಪಕ್ಷಿಧಾಮ.

ವಲಸೆ ಹಕ್ಕಿಗಳಿಗೆ ಎದುರಾಗುತ್ತಿರುವ ಅಪಾಯಗಳು

* ವಾಯುಮಾಲಿನ್ಯ: ವಾಯುಮಾಲಿನ್ಯವು ಸ್ಥಳೀಯ ಪಕ್ಷಿಗಳಿಗೆ ಮಾತ್ರವಲ್ಲದೆ ವಲಸೆ ಹಕ್ಕಿಗಳಿಗೂ ಅಪಾಯ ತಂದೊಡ್ಡಿದೆ. ಅತಿಯಾದ ವಾಯುಮಾಲಿನ್ಯದಿಂದ ವಲಸೆ ಹಕ್ಕಿಗಳು ತಾವು ಬಂದ ಉದ್ದೇಶವು ಈಡೇರದೆ ಕೆಲ ಬಾರಿ ವಲಸೆ ಸ್ಥಳದಲ್ಲಿಯೇ ಸಾವಿಗೀಡಾಗುತ್ತವೆ.

* ಬೇಟೆ: ಅಕ್ರಮವಾಗಿ ಪಕ್ಷಿಗಳ ಬೇಟೆಯು ವಲಸೆ ಹಕ್ಕಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಇನ್ನು ಕೆಲ ಬಾರಿ ತಿಳಿಯದೆ ವಲಸೆ ಹಕ್ಕಿಗಳನ್ನು ಕೊಲ್ಲಲಾಗುತ್ತಿದೆ.

* ವಾಸಸ್ಥಳಗಳ ಅತಿಕ್ರಮಣ: ವಲಸೆ ಬಂದ ಹಕ್ಕಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಿಗದೆ ಅವು ಸಾಯುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಹಕ್ಕಿಗಳ ವಾಸಸ್ಥಾನಗಳನ್ನು ಮಾನವರು ಆಕ್ರಮಿಸಿಕೊಳ್ಳುತ್ತಿರುವುದರಿಂದ ಹಕ್ಕಿಗಳ ವಾಸಕ್ಕೆ ಹಾಗೂ ಸಂತಾನೋತ್ಪತ್ತಿಗೆ ಸೂಕ್ತ ತಾಣಗಳು ಸಿಗದಂತಾಗಿದೆ.

ABOUT THE AUTHOR

...view details