ಬೆಂಗಳೂರು:ಇಡೀ ಜಗತ್ತಿನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಅಸಹಾಯಕರಾಗಿ ಸಾವನ್ನಪ್ಪಿದವರ ಸಂಖ್ಯೆ ಹತ್ತು ಲಕ್ಷವನ್ನೂ ಮೀರಿ ಹೋಗಿದೆ. ದೇಶಗಳು ಒಟ್ಟಾಗಿ ರೋಗ ನಿಯಂತ್ರಣಕ್ಕೆ ಸಹಕರಿಸದೇ ಇದ್ದರೆ, ಒಟ್ಟಾಗಿ ಪ್ರಯತ್ನಿಸದೇ ಇದ್ದರೆ ಈ ಸಂಖ್ಯೆ 20 ಲಕ್ಷಕ್ಕೂ ಮೀರುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
‘ಈ ವಿಪತ್ತಿನ ವಿರುದ್ಧ ಒಟ್ಟಾಗಿ ಹೋರಾಡಲು ನಾವು ತಯಾರಾಗಿದ್ದೇವೆಯೇ...?’ ಎಂಬುದು ಸದ್ಯದ ಗಂಭೀರ ಪ್ರಶ್ನೆಯಾಗಿದೆ. ಕೆಲವು ದೇಶಗಳು ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದೆ ಎಂದು ಡಬ್ಲ್ಯುಎಚ್‌ಒ ಭಾವಿಸಿದೆ. ಈ ದೇಶಗಳಿಗೆ ಎಲ್ಲರೂ ಸುರಕ್ಷಿತವಾಗದ ಹೊರತು ಯಾರೂ ಸುರಕ್ಷಿತವಲ್ಲ ಎಂಬ ಅಂಶ ಅರ್ಥವಾಗಿಯೇ ಇಲ್ಲ. ಕೋವಿಡ್‌ನ ಜನ್ಮ ತಾಣ ಚೀನಾದಲ್ಲಿ 4,650 ಕ್ಕೂ ಕಡಿಮೆ ಜನರು ಸಾವನ್ನಪ್ಪಿದ್ದಾರೆ. ಆದರೆ, ಸೂಪರ್ ಪವರ್ ಅಮೆರಿಕದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇನ್ನೂ ಸಾಂಕ್ರಾಮಿಕ ರೋಗವನ್ನು ತಡೆಯಲು ಶತಪ್ರಯತ್ನ ನಡೆಸುತ್ತಿದೆ.
ಭಾರತವೂ ಇದಕ್ಕೆ ಹೊರತಲ್ಲ:ಒಂದು ವಾರದಲ್ಲಿ ಮರಣವನ್ನಪ್ಪಿದವರ ಸಂಖ್ಯೆ ಒಂದು ಲಕ್ಷಕ್ಕೆ ತಲುಪುತ್ತಿದೆ. ಈ ಮಧ್ಯೆಯೇ, ಕೊರೊನಾ ಸೋಂಕಿನಿಂದ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಮತ್ತು ಮರಣ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಆದರೆ, ಪ್ರತಿ ದಿನ ಹೆಚ್ಚು ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಸವಾಲೇ ಸರಿ. ಭೀಕರ ಸಾಂಕ್ರಾಮಿಕ ರೋಗದ ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಜನರಲ್ಲಿ ಜಾಗೃತಿ ಮೂಡುವುದರಿಂದ ಮಾತ್ರವೇ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಬಹುದಾಗಿದೆ. ಮಾಸ್ಕ್ ಧರಿಸುವುದು ಅತ್ಯಂತ ಅಗತ್ಯ ಎಂದು ದೇಶದ ಶೇ.90 ರಷ್ಟು ಜನರಿಗೆ ಅರ್ಥವಾಗಿದೆ. ಆದರೆ, ಇದನ್ನು ಅನುಸರಿಸಿ ಮಾಸ್ಕ್ ಧರಿಸುತ್ತಿರುವವರ ಸಂಖ್ಯೆ ಶೇ. 44 ರಷ್ಟು ಮಾತ್ರ ಎಂಬುದು ಆಘಾತಕಾರಿ ಸಂಗತಿ. ಮಾಸ್ಕ್ ಉಸಿರು ಕಟ್ಟಿಸುತ್ತದೆ. ನಾವು ದೈಹಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂಬ ನೆವಗಳು ಕೋವಿಡ್‌ಗೆ ಮುಕ್ತ ಆಹ್ವಾನವಾಗುತ್ತದೆ. ಇದು ಜನರ ಜೀವದ ಜೊತೆ ಆಟವಾಡಿದಂತೆಯೇ ಸರಿ.