ಹೈದರಾಬಾದ್:ಎಲ್ಲೆಲ್ಲೂ ಇಂದು ವಿಶ್ವ ಪರಿಸರ ದಿನದ ಸಂಭ್ರಮ. ಪರಿಸರ ಸಂರಕ್ಷಣೆ ನಮ್ಮ ಆದ್ಯತೆ ಎಂಬ ನೆಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.
ವಿಶ್ವ ಪರಿಸರ ದಿನ ಹುಟ್ಟಿಕೊಂಡ ರೀತಿ!
1972 ರಲ್ಲಿ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಘೋಷಣೆ ಮಾಡಿದ ಬಳಿಕ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ದಿಷ್ಟ ವಿಷಯವನ್ನಾಧರಿಸಿ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಅಂತಯೇ 'ಜೀವ ವೈವಿಧ್ಯತೆ ಸಂಭ್ರಮವನ್ನ ಆಚರಿಸಿ' ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ದೇಶಾದ್ಯಂತ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದು ನಿಂತ, ನಿಲ್ಲುತ್ತಿರುವ ಕಟ್ಟಡಗಳ ಸಮುಚ್ಛಯ, ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿ ಮಾಲಿನ್ಯದ ದಟ್ಟ ಹೊಗೆ, ಚರಂಡಿಗಳ ಅವ್ಯವಸ್ಥೆಯಿಂದ ಕೊಳಚೆ ನೀರಿನ ಪ್ರವಾಹ, ವಾಹನಗಳ ಭರಾಟೆ, ಕಲುಷಿತಗೊಂಡ ನೀರು, ಗಾಳಿ, ಆಹಾರದ ಸೇವನೆಗೆ ನಮ್ಮನ್ನೇ ನಾವು ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸ್ಥಿತಿ ನಿರ್ಮಾಣಗೊಂಡಿದೆ.