ಕರ್ನಾಟಕ

karnataka

ETV Bharat / bharat

ಕೋವಿಡ್​-19: ವೃತ್ತಿಪರ ಸುರಕ್ಷತೆ, ಆರೋಗ್ಯಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ.. - ಶುದ್ಧ ಗಾಳಿ

ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಹರಡಬಹುದಾದ ಕೋವಿಡ್​-19 ಸೇರಿದಂತೆ ಇನ್ನಿತರ ಸೋಂಕುಗಳ ಕುರಿತು ಗಮನಹರಿಸುವುದು ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ತ್ರಿಪಕ್ಷೀಯ ಸಂವಾದ ಏರ್ಪಡಿಸಬೇಕಿದೆ. ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಒತ್ತು ನೀಡಲು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

World Day for Safety and Health at Work
World Day for Safety and Health at Work

By

Published : Apr 27, 2020, 3:21 PM IST

ಕಾರ್ಖಾನೆಗಳಲ್ಲಿ, ಕಚೇರಿಗಳಲ್ಲಿ ಅಥವಾ ಹೊರಗಡೆ ಕೆಲಸ ಮಾಡುವ ನೌಕರರ ಸುರಕ್ಷತೆ ಹಾಗೂ ಆರೋಗ್ಯದ ಕಾಳಜಿ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಏ.28 ರಂದು ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ವೃತ್ತಿಪರ ಸುರಕ್ಷತೆ ವಲಯದ ಹೊಸ ಬದಲಾವಣೆಗಳು, ಉದ್ಯೋಗಕ್ಕೆ ಸಂಬಂಧಿಸಿದಂತೆ ಸಂಭವಿಸುವ ಗಾಯ, ರೋಗ ಮತ್ತು ಸಾವು ಹಾಗೂ ಉದ್ಯೋಗಿಗಳ ಒಟ್ಟಾರೆ ಆರೋಗ್ಯದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯ ದಿನ ಅಭಿಯಾನವನ್ನು ವಿಶ್ವಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.

ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಹರಡಬಹುದಾದ ಕೋವಿಡ್​-19 ಸೇರಿದಂತೆ ಇನ್ನಿತರ ಸೋಂಕುಗಳ ಕುರಿತು ಗಮನಹರಿಸುವುದು ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ತ್ರಿಪಕ್ಷೀಯ ಸಂವಾದ ಏರ್ಪಡಿಸಬೇಕಿದೆ. ಕೆಲಸದ ಸ್ಥಳದಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆಗೆ ಒತ್ತು ನೀಡಲು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಈ ದಿನದಂದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ನೈತಿಕ, ಕಾನೂನಾತ್ಮಕ ಹಾಗೂ ಹಣಕಾಸು ಕಾರಣಗಳಿಗಾಗಿ ವೃತ್ತಿಪರ ಆರೋಗ್ಯ ಮತ್ತು ಸುರಕ್ಷತೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕಂಪನಿಯಲ್ಲಿ ಕೆಲಸ ಮಾಡುವ ಹಾಗೂ ಕಂಪನಿಯ ಕೆಲಸಕ್ಕೆ ಸಂಬಂಧಿಸಿದ ಎಲ್ಲ ವೃತ್ತಿಪರರ ಸುರಕ್ಷತೆಯನ್ನು ಖಾತರಿಪಡಿಸುವುದು ಆಯಾ ಕಂಪನಿಗಳ ಜವಾಬ್ದಾರಿಯಾಗಿದೆ. ಉದ್ಯೋಗಿಗಳ ಆರೋಗ್ಯ ಮತ್ತು ಜೀವ ಸಂರಕ್ಷಣೆ ಕಂಪನಿಯ ನೈತಿಕ ಹೊಣೆಗಾರಿಕೆಗಳಾಗಿವೆ. ವೃತ್ತಿಪರ ಸುರಕ್ಷತೆ ಮತ್ತು ಆರೋಗ್ಯದ ಖಾತರಿಯು ಕಾನೂನಾತ್ಮಕ ಹೊಣೆಗಾರಿಕೆಗಳಾಗಿವೆ.

ಕೊರೊನಾ ವೈರಸ್​ ಸಮಯದಲ್ಲಿ ಉದ್ಯೋಗಿಗಳು ತಮ್ಮ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳು

- ಕೈಗಳನ್ನು ಆಗಾಗ ಸ್ವಚ್ಛವಾಗಿ ತೊಳೆಯುವುದು.

- ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

- ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಿಕೊಳ್ಳದಿರುವುದು.

- ಜ್ವರ, ಕೆಮ್ಮಿನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಇದ್ದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು.

- ಸದಾಕಾಲ ಜಾಗರೂಕರಾಗಿದ್ದು ವೈದ್ಯಕೀಯ ಸಲಹೆಗಳನ್ನು ಪಾಲಿಸುವುದು.

ಕೋವಿಡ್​-19 ನಿಂದ ರಕ್ಷಣೆ ಪಡೆಯಲು ಕೆಲಸದ ಸ್ಥಳದಲ್ಲಿ ಅನುಸರಿಸಬೇಕಾದ ಕ್ರಮಗಳು

- ಕೆಲಸ ಮಾಡುವ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

- ನಿಮ್ಮ ಉದ್ಯೋಗಿಗಳು, ಗುತ್ತಿಗೆದಾರರು ಹಾಗೂ ಗ್ರಾಹಕರು ಆಗಾಗ ಸ್ವಚ್ಛವಾಗಿ ಕೈತೊಳೆಯುವಂತೆ ಉತ್ತೇಜಿಸಿ.

- ಉಸಿರಾಟಕ್ಕೆ ಶುದ್ಧ ಗಾಳಿ ಸಿಗುವಂತೆ ಏರ್ಪಾಟು ಮಾಡಬೇಕು.

- ವ್ಯವಹಾರ ಪ್ರಯಾಣ ಹೊರಡುವ ಮುನ್ನ ರಾಷ್ಟ್ರೀಯ ಪ್ರಯಾಣ ನೀತಿಯ ಬಗ್ಗೆ ತಿಳಿದುಕೊಳ್ಳುವಂತೆ ಎಲ್ಲ ಉದ್ಯೋಗಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು.

ಮೀಟಿಂಗ್ ಅಥವಾ ಸಭೆಯ ಮುನ್ನ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

- ಸಭೆ ಅಥವಾ ಸಮಾರಂಭ ಆಯೋಜಿಸುವ ಮುನ್ನ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳಬೇಕು.

- ಸಭೆ, ಸಮಾರಂಭ ನಡೆಯುವ ಸಮಯದಲ್ಲಿ ಕೋವಿಡ್​ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿ ತಯಾರಿಸಿ ಅದಕ್ಕೆ ಅನುಮೋದನೆ ಪಡೆದುಕೊಳ್ಳಬೇಕು.

- ಅನಿರೀಕ್ಷಿತವಾಗಿ ಯಾರಿಗಾದರೂ ಕೋವಿಡ್​-19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು.

ಸಭೆ ನಡೆಯುತ್ತಿರುವಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು

- ಪ್ರಸ್ತುತ ಸಭೆ ಅಥವಾ ಸಮಾರಂಭವನ್ನು ಸುರಕ್ಷಿತವಾಗಿ ಆಯೋಜಿಸಲಾಗಿರುವ ಕುರಿತು ಮೌಖಿಕ ಹಾಗೂ ಲಿಖಿತವಾಗಿ ಹಾಜರಿದ್ದವರಿಗೆ ಮಾಹಿತಿ ನೀಡಿ.

- ಸಭೆ ನಡೆಯುವ ಪ್ರದೇಶದಲ್ಲಿ ಅಲ್ಕೊಹಾಲ್​ ಆಧರಿತ ಸ್ಯಾನಿಟೈಜರ್​​ ಎಲ್ಲರಿಗೂ ಲಭ್ಯವಿರುವಂತೆ ನೋಡಿಕೊಳ್ಳಿ.

- ಸಾಕಷ್ಟು ಸ್ಥಳಾವಕಾಶವಿದ್ದಲ್ಲಿ ಒಬ್ಬರಿಂದೊಬ್ಬರು ಒಂದು ಮೀಟರ್ ಅಥವಾ ಅದಕ್ಕೂ ಹೆಚ್ಚು ಅಂತರದಲ್ಲಿ ಕೂರುವಂತೆ ಆಸನದ ವ್ಯವಸ್ಥೆ ಮಾಡಿ.

- ಕಿಟಕಿ ಹಾಗೂ ಬಾಗಿಲುಗಳನ್ನು ತರೆದಿಟ್ಟು ಸಾಕಷ್ಟು ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ.

- ಆದಾಗ್ಯೂ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡಲ್ಲಿ ಪೂರ್ವಸಿದ್ಧತೆಯ ಕ್ರಮಗಳನ್ನು ಅನುಸರಿಸಿ ಅಥವಾ ತುರ್ತು ಸಹಾಯವಾಣಿಗೆ ಕರೆ ಮಾಡಿ.

ಸಭೆ ಮುಗಿದ ನಂತರ ಕೈಗೊಳ್ಳಬೇಕಾದ ಕ್ರಮಗಳು

- ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಹೆಸರು ಹಾಗೂ ವಿವರಗಳನ್ನು ಕನಿಷ್ಠ ಒಂದು ತಿಂಗಳವರೆಗೆ ಕಾಯ್ದಿಡಿ. ಸಭೆ ಮುಗಿದ ಕೆಲ ಸಮಯದಲ್ಲಿ ಅಕಸ್ಮಾತ್ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಯಾರೆಲ್ಲ ಅದರಿಂದ ಸೋಂಕಿತರಾಗಿರಬಹುದು ಎಂಬುದನ್ನು ಕಂಡುಹಿಡಿಯಲು ಆರೋಗ್ಯಾಧಿಕಾರಿಗಳಿಗೆ ಈ ಮಾಹಿತಿ ಸಹಾಯಕವಾಗುತ್ತದೆ..

- ಕೋವಿಡ್​-19 ಸೋಂಕಿನ ಶಂಕೆಯಿಂದಾಗಿ ಐಸೊಲೇಷನ್​ನಲ್ಲಿರುವ ಯಾರಾದರೂ ಸಭೆಗೆ ಹಾಜರಾಗಿದ್ದರೆ ಆ ಮಾಹಿತಿಯನ್ನು ಸಭೆಗೆ ತಿಳಿಸಬೇಕು. ಈ ಮೂಲಕ ಸ್ಥಳದಲ್ಲಿದ್ದ ಎಲ್ಲರೂ ಮುಂದಿನ 14 ದಿನಗಳವರೆಗೆ ಸೋಂಕಿನ ಲಕ್ಷಣಗಳ ಬಗ್ಗೆ ಗಮನವಿಡಬೇಕು ಹಾಗೂ ಪ್ರತಿದಿನ ಎರಡು ಬಾರಿ ಶರೀರದ ಉಷ್ಣಾಂಶ ಪರೀಕ್ಷೆ ಮಾಡಿಕೊಳ್ಳಬೇಕು.

- ಒಂದೊಮ್ಮೆ ಯಾರಿಗಾದರೂ ಸಣ್ಣ ಪ್ರಮಾಣದ ಜ್ವರ (37.3 ಡಿಗ್ರಿ ಸೆಂಟಿಗ್ರೇಡ್ ಅಥವಾ ಹೆಚ್ಚು) ಅಥವಾ ಕೆಮ್ಮು ಕಾಣಿಸಿಕೊಂಡಲ್ಲಿ ಅಂಥವರು ತಮ್ಮ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್​ಗೆ ಒಳಗಾಗಬೇಕು. ಜೊತೆಗೆ ಹತ್ತಿರದ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ತಮ್ಮ ಇತ್ತೀಚಿನ ಪ್ರಯಾಣ ವಿವರ ಹಾಗೂ ಸೋಂಕಿನ ಲಕ್ಷಣಗಳ ಮಾಹಿತಿಯನ್ನು ನೀಡಬೇಕು.

ಪ್ರಯಾಣಕ್ಕೆ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು

- ಪ್ರಸ್ತುತ ಯಾವೆಲ್ಲ ಪ್ರದೇಶಗಳಲ್ಲಿ ಕೋವಿಡ್​-19 ಸೋಂಕು ವ್ಯಾಪಕವಾಗಿದೆ ಎಂಬುದರ ಬಗ್ಗೆ ನಿಮ್ಮ ಸಂಸ್ಥೆ ಹಾಗೂ ಉದ್ಯೋಗಿಗಳಿಗೆ ಮಾಹಿತಿ ಇರುವಂತೆ ನೋಡಿಕೊಳ್ಳಿ.

- ಲಭ್ಯವಿರುವ ಮಾಹಿತಿಯ ಮೇರೆಗೆ ಆಯೋಜಿಸಲಾದ ಪ್ರಯಾಣದಿಂದ ಕಂಪನಿಗಾಗುವ ಲಾಭ ಹಾಗೂ ಅಪಾಯದ ಅಂಶಗಳನ್ನು ತುಲನೆ ಮಾಡಬೇಕು.

- ಕೋವಿಡ್​-19 ಸೋಂಕು ಹೆಚ್ಚಾಗಿರುವ ಪ್ರದೇಶಗಳಿಗೆ ಕಂಪನಿಯ ವಯಸ್ಕ ಉದ್ಯೋಗಿಗಳು (ವಯಸ್ಕರು ಹಾಗೂ ಹೃದಯ ಕಾಯಿಲೆ, ಮಧುಮೇಹ, ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿರುವವರು) ಪ್ರಯಾಣ ಕೈಗೊಳ್ಳದಂತೆ ಎಚ್ಚರಿಕೆ ವಹಿಸಿ.

- ಕೋವಿಡ್​-19 ಸೋಂಕಿನ ಪ್ರದೇಶಗಳಿಗೆ ಪ್ರಯಾಣ ಹೊರಡುವ ಉದ್ಯೋಗಿಗಳಿಗೆ ನುರಿತ ವೈದ್ಯಕೀಯ ಸಿಬ್ಬಂದಿಯಿಂದ ಆರೋಗ್ಯ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿ.

- ಪ್ರಯಾಣ ಹೊರಡುವ ಉದ್ಯೋಗಿಯ ಬಳಿ ಚಿಕ್ಕ (100 ಮಿಲೀ) ಸ್ಯಾನಿಟೈಜರ್ ಬಾಟಲಿ ಇರುವಂತೆ ನೋಡಿಕೊಳ್ಳಿ.

ಪ್ರಯಾಣದಲ್ಲಿರುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು

- ಪ್ರಯಾಣದಲ್ಲಿರುವಾಗ ಆಗಾಗ ಕೈತೊಳೆಯುವಂತೆ ಉದ್ಯೋಗಿಗೆ ಸೂಚಿಸಿ. ಸಹಪ್ರಯಾಣಿಕರಲ್ಲಿ ಯಾರಾದರೂ ಸತತವಾಗಿ ಕೆಮ್ಮುತ್ತಿದ್ದರೆ ಅಥವಾ ಸೀನುತ್ತಿದ್ದರೆ ಅಂಥವರಿಂದ ಕನಿಷ್ಠ ಒಂದು ಮೀಟರ್ ಅಂತರ ಕಾಪಾಡಿಕೊಳ್ಳಬೇಕು.

- ಪ್ರಯಾಣ ಕೈಗೊಳ್ಳುವ ಪ್ರದೇಶದಲ್ಲಿನ ಸ್ಥಳೀಯ ಅಧಿಕಾರಿಗಳ ಆದೇಶಗಳನ್ನು ಪಾಲಿಸುವಂತೆ ನಿಮ್ಮ ಉದ್ಯೋಗಿಗೆ ಸೂಚಿಸಿ.

ABOUT THE AUTHOR

...view details