ಇಂದು ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ: ಇಲ್ಲಿದೆ ಬೆಚ್ಚಿಬೀಳಿಸುವ ಅಂಕಿ-ಅಂಶಗಳು - ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನ
ಜಗತ್ತು ಎದುರಿಸುತ್ತಿರುವ ಪ್ರಬಲ ಸಮಸ್ಯೆಗಳಲ್ಲಿ ಮಾನವ ಕಳ್ಳ ಸಾಗಣೆಯೂ ಒಂದು. ಇಂತಹ ಕೃತ್ಯಕ್ಕೆ ಬಲಿಯಾದ ಬಲಿಪಶುಗಳಲ್ಲಿ ಶೇ. 72 ರಷ್ಟು ಮಹಿಳೆಯರು ಮತ್ತು ಚಿಕ್ಕ ಬಾಲಕಿಯರು ಅನ್ನೋದು ವಿಪರ್ಯಾಸ. ಇನ್ನೊಂದೆಡೆ, ಈ ಕಳ್ಳಸಾಗಣೆಗೆ ವಯಸ್ಸಿನ ಲೆಕ್ಕವಿಲ್ಲದಂತೆ ಪುಟ್ಟ ಮಕ್ಕಳೂ ಕೂಡಾ ಬಲಿಯಾಗುತ್ತಿದ್ದಾರೆ.
ಮಾನವ ಕಳ್ಳಸಾಗಣೆ
By
Published : Jul 30, 2020, 4:32 PM IST
ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) 2013 ರಲ್ಲಿ A/RES/68/192 ನಿರ್ಣಯವನ್ನು ಅಂಗೀಕರಿಸುವ ಮೂಲಕ ಜುಲೈ 30ನ್ನು ವಿಶ್ವ ಮಾನವ ಕಳ್ಳಸಾಗಣೆ ವಿರುದ್ಧ ದಿನವೆಂದು ಘೋಷಿಸಿದೆ. ಮಾನವ ಕಳ್ಳಸಾಗಣೆಗೆ ಬಲಿಯಾದವರು ಮತ್ತು ಅವರ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆಗಾಗಿ ಈ ದಿನಾಚರಣೆ ಅಗತ್ಯ ಎಂದು ನಿರ್ಣಯವನ್ನು ಘೋಷಿಸಿತ್ತು.
ಮಾನವ ಕಳ್ಳಸಾಗಣೆ ಎಂದರೇನು?
ವಿಶ್ವಸಂಸ್ಥೆಯ ಪ್ರಕಾರ, ಮಾನವ ಕಳ್ಳಸಾಗಣೆ ಎಂದರೆ, ಮನುಷ್ಯರಿಗೆ ಬೆದರಿಕೆ ಹಾಕಿ, ಬಲವಂತವಾಗಿ ಅಥವಾ ಇತರ ರೀತಿಯ ದಬ್ಬಾಳಿಕೆಯ ಮೂಲಕ, ಒಂದು ಕಡೆಯಿಂದ ಮತ್ತೊಂದೆಡೆಗೆ ಬಲವಂತವಾಗಿ ಸಾಗಿಸುವುದು. ಅಪಹರಣ, ವಂಚನೆ ಮಾಡುವುದು, ಶೋಷಣೆಯ ಉದ್ದೇಶಕ್ಕಾಗಿ ಅಧಿಕಾರದ ದುರುಪಯೋಗ ಅಥವಾ ಒಬ್ಬ ವ್ಯಕ್ತಿಯ ಮೇಲೆ ನಿಯಂತ್ರಣ ಹೊಂದುವ ಮೂಲಕ ಮತ್ತೊಬ್ಬ ವ್ಯಕ್ತಿಯ ಒಪ್ಪಿಗೆಯನ್ನು ಸಾಧಿಸಲು ಹಣವನ್ನು ನೀಡುವುದು ಅಥವಾ ಪಡೆಯುವುದು.
ಮಾನವ ಕಳ್ಳಸಾಗಣೆ ವಿಶ್ವದ ಪ್ರತಿಯೊಂದು ಪ್ರದೇಶದ ಮೇಲೆ ಪರಿಣಾಮ ಬೀರುವ ಘೋರ ಅಪರಾಧವಾಗಿದೆ. ಇಂತಹ ಕೃತ್ಯಕ್ಕೆ ಬಲಿಯಾದ ಬಲಿಪಶುಗಳಲ್ಲಿ ಶೇ. 72 ರಷ್ಟು ಮಹಿಳೆಯರು ಮತ್ತು ಚಿಕ್ಕ ಬಾಲಕಿಯರು ಅನ್ನೋದು ವಿಪರ್ಯಾಸ. ಇನ್ನೊಂದು ಕಡೆ ಇದಕ್ಕೆ ಬಲಿಯಾಗುತ್ತಿರುವ ಮಕ್ಕಳ ಶೇಕಡಾವಾರು ಪ್ರಮಾಣವು 2004 ರಿಂದ 2016 ರವರೆಗೆ ದ್ವಿಗುಣಗೊಂಡಿದೆ ಎಂದು ವಿಶ್ವಸಂಸ್ಥೆಯ ಡ್ರಗ್ಸ್ ಆ್ಯಂಡ್ ಕ್ರೈಮ್ ಆಫೀಸ್ (UNODC) ತಿಳಿಸಿದೆ.
ಕಳ್ಳಸಾಗಣೆ ಮಾಡುವ ಉದ್ದೇಶವೇನು?
ದೇಶೀಯ ಸೇವೆ...
ಖಾಸಗಿ ಮನೆಗಳಲ್ಲಿ ಕೆಲಸ ಮಾಡುವ ನೌಕರರನ್ನು ಬಲವಂತವಾಗಿ ಅಥವಾ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ ಮತ್ತು ಅವರು ತಪ್ಪಿಸಿಕೊಳ್ಳಲು ಯಾವುದೇ ಆಯ್ಕೆ ಇರದಂತೆ ಮೋಸದಿಂದ ನಡೆಸಿಕೊಳ್ಳಲಾಗುತ್ತದೆ.
ಲೈಂಗಿಕ ಕಳ್ಳಸಾಗಣೆ...
ಮಹಿಳೆಯರು, ಪುರುಷರು ಅಥವಾ ಮಕ್ಕಳು ಘೋರ ಲೈಂಗಿಕ ಚಟುವಟಿಕೆಗಳನ್ನು ನಡೆಸುವ ವಾಣಿಜ್ಯ ಉದ್ಯಮಕ್ಕೆ ಬಲವಂತವಾಗಿ ಸಾಗಿಸಲ್ಪಡುತ್ತಾರೆ. ಬಲವಂತವಾಗಿ, ವಂಚನೆ ಅಥವಾ ದಬ್ಬಾಳಿಕೆಯಿಂದ ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲ್ಪಡುತ್ತಾರೆ.
ಬಲವಂತದ ಕೆಲಸ...
ಹಿಂಸೆ ಮಾಡಿ ಬೆದರಿಕೆಯಡಿಯಲ್ಲಿ ಮತ್ತು ಯಾವುದೇ ವೇತನವಿಲ್ಲದೆ ಕೆಲಸ ಮಾಡಲು ಮನುಷ್ಯರನ್ನು ಒತ್ತಾಯಿಸಿ ಕಳ್ಳಸಾಗಣೆ ಮಾಡಲಾಗುತ್ತದೆ. ಅವರನ್ನು ವಾಣಿಜ್ಯ ಮಾರಾಟಕ್ಕಾಗಿ ಉತ್ಪನ್ನವನ್ನು ರಚಿಸಲು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತದೆ.
ಜೀತದಾಳು...
ಸಾಲವನ್ನು ಮರುಪಾವತಿಸುವ ಸಲುವಾಗಿ ಕೆಲಸ ಮಾಡಲು ಒತ್ತಾಯಿಸುವುದು ಮತ್ತು ಸಾಲವನ್ನು ಮರುಪಾವತಿಸುವವರೆಗೆ ಬಿಡಲು ಸಾಧ್ಯವಾಗದಂತೆ ಬಂಧಿಸಲ್ಪಟ್ಟ ಕಾರ್ಮಿಕರು. ಇದು ವಿಶ್ವದ ಗುಲಾಮಗಿರಿಯ ಸಾಮಾನ್ಯ ರೂಪವಾಗಿದೆ.
ಬಾಲಕಾರ್ಮಿಕ ಪದ್ಧತಿ...
ಬಲವಂತದ ದುಡಿಮೆ, ದಾಸ್ಯಕ್ಕಾಗಿ ಮಕ್ಕಳ ಲೈಂಗಿಕ ಕಳ್ಳಸಾಗಣೆ ಅಥವಾ ಯಾವುದೇ ರೀತಿಯ ಗುಲಾಮಗಿರಿ.
ಬಲವಂತದ ಮದುವೆ...
ಮಹಿಳೆಯರು ಮತ್ತು ಮಕ್ಕಳು ತಮ್ಮ ಒಪ್ಪಿಗೆಯಿಲ್ಲದೆ ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ಇನ್ನೊಬ್ಬರನ್ನು ಮದುವೆಯಾಗಲು ಒತ್ತಾಯಿಸಲ್ಪಡುತ್ತಾರೆ.
ಭಾರತದಲ್ಲಿ ಮಾನವ ಕಳ್ಳಸಾಗಣೆ...
ಭಾರತದಲ್ಲಿ ಮಾನವ ಕಳ್ಳಸಾಗಣೆಯಿಂದ ಸುಮಾರು 2 ಕೋಟಿಯಿಂದ ಆರೂವರೆ ಕೋಟಿ ಜನರ ಬಲಿಯಾಗಿರಬಹುದು. ವಾಣಿಜ್ಯ ಲೈಂಗಿಕ ಶೋಷಣೆ ಮತ್ತು ಬಲವಂತದ ಮದುವೆಯ ಉದ್ದೇಶಗಳಿಗಾಗಿ ಮಹಿಳೆಯರು ಮತ್ತು ಹುಡುಗಿಯರನ್ನು ದೇಶದೊಳಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಲಿಂಗಾನುಪಾತ ತುಂಬಾ ಕಡಿಮೆಯಿರುವ ಪ್ರದೇಶಗಳಲ್ಲಿ ಇದು ಹೆಚ್ಚು. ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕಾರ್ಖಾನೆಯ ಕಾರ್ಮಿಕರು, ಮನೆ ಕೆಲಸದಾಳು, ಭಿಕ್ಷಾಟನೆ ಮತ್ತು ಕೃಷಿ ಕಾರ್ಮಿಕರಾಗಿ ಬಲವಂತದ ದುಡಿಮೆಗೆ ಒಳಪಡಿಸಲಾಗುತ್ತದೆ. ಇನ್ನೊಂದು ಕೆಡೆ ದಂಗೆಕೋರರು ಅಥವಾ ಭಯೋತ್ಪಾದಕ ಗುಂಪುಗಳಿಗೂ ಕೆಲ ಮಕ್ಕಳನ್ನು ಬಾಲಸೈನಿಕರಾಗಿ ದುರ್ಬಳಕೆ ಮಾಡಲಾಗುತ್ತಿದೆ.
ಭಾರತದಲ್ಲಿ ಕಳ್ಳಸಾಗಣೆಗೆ ಸಂಬಂಧಿಸಿದ ಸಾಂವಿಧಾನಿಕ ಮತ್ತು ಶಾಸಕಾಂಗ ನಿಬಂಧನೆಗಳು...
ಆ್ಯಂಟಿ ಟ್ರಾಫಿಕಿಂಗ್ ಸೆಲ್ (ATC): 2006ರಲ್ಲಿ ಕೇಂದ್ರ ಗೃಹ ಸಚಿವಾಲಯವು ಮಾನವ ಕಳ್ಳಸಾಗಣೆ ಅಪರಾಧವನ್ನು ನಿಭಾಯಿಸಲು ಕಳ್ಳಸಾಗಣೆ ವಿರೋಧಿ ನೋಡಲ್ ಸೆಲ್ಅನ್ನು ಸ್ಥಾಪಿಸಿದೆ.
2018 ರಲ್ಲಿ ಕಳ್ಳಸಾಗಣೆ ವಿರೋಧಿ ಮಸೂದೆಯನ್ನು ಕೇಂದ್ರ ಸಚಿವೆ ಮನೇಕಾ ಗಾಂಧಿ ಪರಿಚಯಿಸಿದರು. ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಸಭೆಯು ಅದನ್ನು ಅಂಗೀಕರಿಸದ ಕಾರಣ ಮಸೂದೆ ಜೀವ ಕಳೆದುಕೊಂಡಿತು.
ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿ
ದೇಶದ 332 ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು (AHTUs) ಸ್ಥಾಪಿಸಲು ಗೃಹ ಸಚಿವಾಲಯವು ವಿವಿಧ ರಾಜ್ಯಗಳಿಗೆ ಆರ್ಥಿಕ ನೆರವು ನೀಡಿದೆ.
2018 ರಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಣೆಯಾದ ಒಟ್ಟು ಮಕ್ಕಳ ಸಂಖ್ಯೆ 67134.
ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 ಮತ್ತು 370 ಎ ಅಡಿಯಲ್ಲಿ ಪ್ರಕರಣಗಳನ್ನು ತನಿಖೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ ದ್ದುಪಡಿ ಕಾಯ್ದೆ 2019ರ ಪ್ರಕಾರ, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅಧಿಕಾರ ನೀಡಲಾಗಿದೆ.
ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗ(ಎಎಚ್‌ಟಿಯು)ಳನ್ನು ಸ್ಥಾಪಿಸಲು ಅಥವಾ ಬಲಪಡಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಸಹಾಯವನ್ನು ನಿರ್ಭಯಾ ನಿಧಿಯಡಿ ಸರ್ಕಾರ ಅನುಮೋದಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು:
ವರ್ಷ
ಪ್ರಕರಣಗಳು
ಮಾನವ ಕಳ್ಳಸಾಗಣೆಗೆ ಶಿಕ್ಷೆಗೊಳಗಾದ ವ್ಯಕ್ತಿಗಳ ಸಂಖ್ಯೆ
2016
8132
159
2017
2854
249
2018
2465
432
ಅಗ್ರ 5 ರಾಜ್ಯಗಳು
ರಾಜ್ಯಗಳು
ಪ್ರಕರಣಗಳು 2016-2018
2016
2017
2018
ಪಶ್ಚಿಮ ಬಂಗಾಳ
3,579
357
172
ಮಹಾರಾಷ್ಟ್ರ
517
310
311
ರಾಜಸ್ಥಾನ
1,422
316
86
ತೆಲಂಗಾಣ
229
329
242
ಆಂಧ್ರ ಪ್ರದೇಶ
239
218
240
ಯುನೈಟೆಡ್ ನೇಷನ್ಸ್ ಡ್ರಗ್ಸ್ ಅಂಡ್ ಕ್ರೈಮ್ ಆಫೀಸ್ (ಯುಎನ್‌ಒಡಿಸಿ) ವರದಿಯ ಪ್ರಕಾರ, ಮಾನವ ಕಳ್ಳಸಾಗಾಣಿಕೆಗೆ ಬಲಿಯಾದವರಲ್ಲಿ ಬಹುಪಾಲು, ಅಂದರೆ ಶೇ. 71 ರಷ್ಟು ಮಹಿಳೆಯರು ಮತ್ತು ಬಾಲಕಿಯರು ಮತ್ತು ಮೂರನೇ ಒಂದು ಭಾಗದಷ್ಟು ಮಕ್ಕಳು.
ಎನ್‌ಸಿಆರ್‌ಬಿ ವರದಿಯ ಪ್ರಕಾರ ಕಾಣೆಯಾದ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ
ಹೆಚ್ಚು ಮಹಿಳೆಯರು ಕಾಣೆಯಾಗಿರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ
ರಾಜ್ಯ
ವರ್ಷ
2016
2017
2018
ಮಹಾರಾಷ್ಟ್ರ
28,316
29,279
33,964
ಪಶ್ಚಿಮ ಬಂಗಾಳ
24,937
28,133
31,299
ಮಧ್ಯ ಪ್ರದೇಶ
21,435
26,587
29,761
ದೆಹಲಿ
12,067
12,202
13,272
ಮಹಾರಾಷ್ಟ್ರದಲ್ಲಿ ಕಳೆದ 2016, 2017 ಮತ್ತು 2018 ರ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಮಹಿಳೆಯರು ಕಾಣೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ದೆಹಲಿ ಇದೆ.
ಕಾಣೆಯಾದ ಮಕ್ಕಳ ಸಂಖ್ಯೆ...
2018 ರಲ್ಲಿ ಒಟ್ಟು 67,134 ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.