ಬಾಲಕಾರ್ಮಿಕ ಪದ್ಧತಿಯು ಮಾನವ ಕುಲಕ್ಕೆ ಅಂಟಿದ ಕಳಂಕವಾಗಿದ್ದು, ಇದರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕಿದೆ. ಇಂದು ಜೂನ್ 12 ರಂದು ವಿಶ್ವಾದ್ಯಂತ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತಿದ್ದು, ಚಿಣ್ಣರ ಹಕ್ಕುಗಳ ರಕ್ಷಣೆಗಾಗಿ ನಾವೆಲ್ಲ ಪಣತೊಡೋಣ.
ಬಾಲ್ಯವನ್ನು ಕಸಿದುಕೊಳ್ಳುವ, ಅವರ ಸಾಮರ್ಥ್ಯವನ್ನು ಚಿವುಟಿ ಹಾಕುವ ಮತ್ತು ಮಕ್ಕಳ ಗೌರವಕ್ಕೆ ಕುಂದು ತರುವ ಅನಿಷ್ಟವೇ ಬಾಲಕಾರ್ಮಿಕ ಪದ್ಧತಿಯಾಗಿದೆ. ಜೊತೆಗೆ ಬಾಲ್ಯದಲ್ಲೇ ದುಡಿಮೆಗೆ ಸೇರುವುದರಿಂದ ಅಂಥ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ವಿಶ್ವ ಕಾರ್ಮಿಕ ಸಂಘಟನೆಯು 2002 ರಿಂದ ಪ್ರತಿವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಆರಂಭಿಸಿತು.
2020 ರ ಬಾಲಕಾರ್ಮಿಕ ವಿರೋಧಿ ದಿನ ವರ್ಚುವಲ್
ಈ ಬಾರಿ ಬಾಲಕಾರ್ಮಿಕ ವಿರೋಧಿ ದಿನವನ್ನು ವಿಶ್ವಾದ್ಯಂತ ವರ್ಚುವಲ್ ಮಾರ್ಗದ ಮೂಲಕ ಆಚರಿಸಲಾಗುತ್ತಿದ್ದು, ಗ್ಲೋಬಲ್ ಮಾರ್ಚ್ ಅಗೇನ್ಸ್ಟ್ ಚೈಲ್ಡ್ ಲೇಬರ್ ಸಂಘಟನೆಯು ಪ್ರಸ್ತುತ ವರ್ಷದ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಮುಂದಾಳತ್ವ ವಹಿಸಿಕೊಂಡಿದೆ.
ಬಾಲಕಾರ್ಮಿಕ ವಿರೋಧಿ ದಿನದ ಇತಿಹಾಸ
- ಸಾಮಾಜಿಕ ನ್ಯಾಯ ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಹಕ್ಕುಗಳ ಸ್ಥಾಪನೆಗಾಗಿ 1919 ರಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನು (International Labour Organisation -ILO) ಹುಟ್ಟು ಹಾಕಲಾಯಿತು. ಪ್ರಸ್ತುತ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗೆ 187 ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಇವುಗಳಲ್ಲಿನ 186 ದೇಶಗಳು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಾಗಿವೆ. 187ನೇ ಸದಸ್ಯ ರಾಷ್ಟ್ರವಾಗಿ ಕುಕ್ ಐಲ್ಯಾಂಡ್ (ಸೌತ್ ಪೆಸಿಫಿಕ್) ನೋಂದಾಯಿಸಿಕೊಂಡಿದೆ. ವಿಶ್ವಾದ್ಯಂತ ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗಾಗಿ ಐಎಲ್ಓ ಸತತವಾಗಿ ಶ್ರಮಿಸುತ್ತಿದೆ.
- 2002 ರಲ್ಲಿ 138 ಮತ್ತು 182ನೇ ಸಂಖ್ಯೆಯ ಗೊತ್ತುವಳಿಗಳ ಮೂಲಕ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಆಚರಣೆಯನ್ನು ಆರಂಭಿಸಲಾಯಿತು.
ಬಾಲಕಾರ್ಮಿಕ ಪದ್ಧತಿಯ ವ್ಯಾಪಕತೆ
- ವಿಶ್ವದ ಪ್ರತಿ 10 ಮಕ್ಕಳಲ್ಲಿ ಓರ್ವ ಮಗು ಬಾಲಕಾರ್ಮಿಕನಾಗಿ ದುಡಿಯುತ್ತಿದೆ. ಇಸ್ವಿ 2000 ದಷ್ಟೊತ್ತಿಗೆ ವಿಶ್ವದ ಬಾಲಕಾರ್ಮಿಕರ ಸಂಖ್ಯೆಯು 94 ಮಿಲಿಯನ್ನಷ್ಟು ಕಡಿಮೆಯಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಈ ಪ್ರಮಾಣ ಮೂರನೇ ಎರಡರಷ್ಟಕ್ಕೆ ಇಳಿದಿದೆ.
- ವಿಶ್ವಸಂಸ್ಥೆಯ ಸ್ಥಿರ ಅಭಿವೃದ್ಧಿ ಗುರಿ ಸಾಧನೆಯಡಿ 2025ರ ವೇಳೆಗೆ ವಿಶ್ವಾದ್ಯಂತ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿವಾರಣೆ ಮಾಡುವ ಗುರಿ ಹೊಂದಲಾಗಿದೆ.
- ಬಲವಂತದಿಂದ ದುಡಿಸಿಕೊಳ್ಳುವುದು, ಆಧುನಿಕ ಜೀತ ಪದ್ಧತಿ ಮತ್ತು ಮಾನವ ಕಳ್ಳಸಾಗಾಟಗಳನ್ನು ತಡೆಗಟ್ಟುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಲಾಗಿದೆ. ಜೊತೆಗೆ ಸೇನೆಯಲ್ಲಿ ಮಕ್ಕಳ ಸೇರ್ಪಡೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ.