ಮಹಿಳಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯನ್ನು ಏಳು ಮಂದಿ ಮಹಿಳಾ ಸಾಧಕಿಯರು ಬಳಸುವಂತೆ ಅವಕಾಶ ಕಲ್ಪಿಸಿದ್ದಾರೆ. ಈ ಹಿಂದೆ ಮಾರ್ಚ್ 3 ರಂದು ಪ್ರಧಾನಿ ತಿಳಿಸಿರುವ ಹಾಗೆ, ಮಹಿಳಾ ದಿನದಂದು ತಮ್ಮ ಟ್ವಿಟ್ಟರ್ ಖಾತೆಯಿಂದ ಲಾಗ್ ಔಟ್ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ಮೋದಿ, ನಮ್ಮ ನಾರಿ ಶಕ್ತಿಗೆ ಸೆಲ್ಯೂಟ್ ಮಾಡುತ್ತೇವೆ. ನಾನು ಈ ಹಿಂದೆ ಹೇಳಿದ ಹಾಗೆ ಟ್ವಿಟ್ಟರ್ನಿಂದ ಸೈನ್ ಆಫ್ ಆಗಿದ್ದೇನೆ. ಇಂದು ಇಡೀ ದಿನ ಏಳು ಮಹಿಳಾ ಸಾಧಕಿಯರು ನನ್ನ ಟ್ವಿಟ್ಟರ್ಖಾತೆಯನ್ನು ನಿಭಾಯಿಸುತ್ತಾರೆ. ಅಲ್ಲದೆ ಜನರ ಜೊತೆ ಟ್ವಿಟ್ಟರ್ನಲ್ಲಿ ಸಂವಾದ ನಡೆಸಲಿದ್ದಾರೆ ಎಂದಿದ್ದಾರೆ.
ಇನ್ನು ಮಹಿಳಾ ದಿನದ ಅಂಗವಾಗಿ ಸರಣಿ ಟ್ವೀಟ್ ಮಾಡಿರುವ ಮೋದಿ, ನಮ್ಮ ದೇಶದ ನಾನಾ ರಂಗಗಳಲ್ಲಿ ಮಹಿಳಾ ಸಾಧಕಿಯರಿದ್ದಾರೆ. ಈ ಮಹಿಳೆಯರು ತಮ್ಮ ರಂಗದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈ ಸಾಧಕಿಯರ ಕಷ್ಟಗಳು ಮಿಲಿಯನ್ಗಟ್ಟಲೆ ಜನರಿಗೆ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿಯ ಟ್ವಿಟ್ಟರ್ ಖಾತೆ ಮಾತ್ರವಲ್ಲದೆ, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ತಾಣಗಳನ್ನು ಮಹಿಳಾ ಸಾಧಕಿಯರು ಬಳಸುವಂತೆ ಹೇಳಿದ್ದಾರೆ.
ಭಾರತದಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಮೋದಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ಇನ್ಸ್ಟಾಗ್ರಾಮ್ ಖಾತೆಗೆ 35.2 ಮಿಲಿಯನ್, ಫೇಸ್ಬುಕ್ಗೆ 44 ಮಿಲಿಯನ್ ಹಾಗೂ ಟ್ವಿಟ್ಟರ್‌ಗೆ 53.3 ಮಿಲಿಯನ್ ಹಿಂಬಾಲಕರಿದ್ದಾರೆ.
ಇನ್ನು ಟ್ವಿಟ್ಟರ್ನಲ್ಲಿ ಮೊದಲ ಬಾರಿಗೆ 50 ಮಿಲಿಯನ್ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ ಎಂಬ ಖ್ಯಾತಿಗೂ ಮೋದಿ ಪಾತ್ರರಾಗಿದ್ದಾರೆ.
ಇನ್ನು ಪ್ರಧಾನಿ ಕೊಟ್ಟಿರುವ ಅವಕಾಶವನ್ನು ಬಳಸಿಕೊಂಡಿರುವ ಮಾಳವಿಕಾ ಐಯ್ಯರ್ ತಮ್ಮ ಜೀವನದ ಕಷ್ಟಗಳನ್ನು ವಿಡಿಯೋ ಮೂಲಕ ಶೇರ್ ಮಾಡಿದ್ದಾರೆ. ಬಾಂಬ್ ಬ್ಲಾಸ್ಟ್ನಲ್ಲಿ ತಮ್ಮ ಎರಡೂ ಕೈ ಗಳನ್ನು ಕಳೆದುಕೊಂಡರೂ ಹತ್ತನೇ ತರಗತಿಯನ್ನು ಶೇ 97 ಅಂಕ ಗಳಿಸಿ ಸಾಧನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಕಾಶ್ಮೀರದ ಅಫ್ರಿಕಾ ಎಂಬ ಮಹಿಳೆ ಕೂಡ ತನ್ನ ಜೀವನದ ಬಗ್ಗೆ ಮೋದಿ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನಾನು ಯಾವಾಗಲೂ ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸುವ ಕನಸು ಕಂಡಿದ್ದೇನೆ. ಯಾಕಂದ್ರೆ, ಈ ಕಲೆ ಇಲ್ಲಿನ ಸ್ಥಳೀಯ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಾಧನವಾಗಿದೆ ಎಂದಿದ್ದಾರೆ.
ಮತ್ತೊಬ್ಬ ಸಾಧಕಿ ಸ್ನೇಹ ಮೋಹನ್ ದಾಸ್ ಎಂಬುವವರು ತಮ್ಮ ಜೀವನದ ಬಗ್ಗೆ ಟ್ವೀಟ್ ಮಾಡಿದ್ದು, ನಾನು 2015ರಿಂದ ಫುಡ್ ಬ್ಯಾಂಕ್ ನಡೆಸುತ್ತಿದ್ದು, ಹಸಿದವರಿಗೆ ಮತ್ತು ಮನೆ ಇಲ್ಲದವರಿಗೆ ಅನ್ನ ಊಟ ನೀಡುವ ಕೆಲಸ ಮಾಡುತ್ತಿದ್ದೇನೆ. ಈ ಕಾಯಕ ಮಾಡಲು ನನ್ನ ತಾಯಿ ಸ್ಫೂರ್ತಿಯಾದ್ರು ಎಂದು ಬರೆದುಕೊಂಡಿದ್ದಾರೆ.