ಮುಂಬೈ:ದೇಶ ಸೇವೆ ದೇಶ ಪ್ರೇಮ ಕೇವಲ ಮನುಷ್ಯರಿಗೆ ಸೀಮಿತವಲ್ಲ, ಸೇನೆ, ಪೊಲೀಸ್ ಇಲಾಖೆಯ ಮೂಲಕ ಶ್ವಾನಗಳು ಕೂಡ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದು ಹಳೆ ವಿಚಾರ ಇದ್ರಲೇನು ಹೊಸದ್ದು ಅಂತೀರಾ ಈ ಸ್ಟೋರಿ ಓದಿ..
ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಬೇಕು, ಪೊಲೀಸ್ ಇಲಾಖೆಗೆ ಸೇರಿಸಬೇಕು, ಆತ/ಆಕೆ ದೇಶ ಕಾಯಬೇಕು ಎಂದು ಹಲವು ಪೋಷಕರು ಕನಸು ಕಾಣುತ್ತಾರೆ. ಆದರೆ ಮುಂಬೈನ ಮಹಿಳೆಯೊಬ್ಬರು ತಾವು ಸಾಕಿದ ಮೂರು ಮುದ್ದಾದ ನಾಯಿ ಮರಿಗಳನ್ನು ಪೊಲೀಸ್ ಇಲಾಖೆಗೆ ನೀಡಲು ಮುಂದಾಗಿದ್ದಾರೆ.
ಹೌದು ಮುಂಬೈನ ರಕ್ಷಿತಾ ಮೆಹ್ತಾ ಎಂಬವರೇ ಜರ್ಮನ್ ಶೆಫರ್ಡ್ ತಳಿಯ ಮೂರು ನಾಯಿ ಮರಿಗಳನ್ನ ಪೊಲೀಸ್ ಇಲಾಖೆಗೆ ನೀಡಲು ಮುಂದಾದವರು. ಈ ಬಗ್ಗೆ ಅವರು ಮುಂಬೈ ಪೊಲೀಸ್ ಕಮೀಷನರ್ ಸಂಜಯ್ ಬರ್ವೆ ಅವರನ್ನು ಕೇಳಿದ್ದಾರೆ. ಇದಕ್ಕೆ ಪೊಲೀಸ್ ಕಮೀಷನರ್ ಕೂಡ ಸಕರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಪೊಲೀಸ್ ಇಲಾಖೆ ಈ ನಾಯಿಮರಿಗಳನ್ನು ಇಲಾಖೆಗೆ ಸೇರಿಸಿಕೊಳ್ಳಲು ಸಮ್ಮತಿಸಿದೆ ಎಂದಿದ್ದಾರೆ.
ಈ ಬಗ್ಗೆ ಮುಂಬೈ ಪೊಲೀಸ್ ಕಮೀಷನರ್ ಸಂಜಯ್ ಬರ್ವೆ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರಕ್ಷಿತಾ ಮೆಹ್ತಾ ಅವರು, ತಮ್ಮ ನಾಯಿ ಮರಿಗಳನ್ನು ಪೊಲೀಸ್ ಇಲಾಖೆಗೆ ನೀಡುತ್ತೇವೆ ಎಂದಾಗ, ನಾವು ಇವುಗಳನ್ನು ಇಟ್ಟುಕೊಳ್ಳಬಹುದೇ... ಎಂಬುದೇ ನಮ್ಮ ಮೊದಲ ಪ್ರತಿಕ್ರಿಯೆ ಆಗಿತ್ತು. ನಾವು ಈ ನಾಯಿ ಮರಿಗಳಿಗೆ ಉತ್ತಮವಾದ ತರಬೇತಿ ನೀಡಿ ನಗರದ ರಕ್ಷಕರನ್ನಾಗಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಪೊಲೀಸ್ ಕಮೀಷನರ್ ಟ್ವಿಟ್ಗೆ ಪ್ರಸ್ತುತ ನಾಯಿಗಳ ಮಾಲಕಿಯಾಗಿರುವ ರಕ್ಷಿತಾ ಮೆಹ್ತಾ ಪ್ರತಿಕ್ರಿಯಿಸಿದ್ದು, ನನಗೀಗ ದೇಶ ಕಾಯುವ ಸೈನಿಕನ ತಾಯಿ ನಾನು ಎಂದೆನಿಸುತ್ತಿದೆ. ನನ್ನ ಮಕ್ಕಳು ದೇಶ ಸೇವೆ ಮಾಡಲಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.