ಕರ್ನಾಟಕ

karnataka

ETV Bharat / bharat

ಹವಾಮಾನ ವೀಕ್ಷಣೆಯ ಮೇಲೆ ಕೋವಿಡ್ ಪ್ರಭಾವ: WHO ಕಳವಳ - ಕೊರೊನಾ ವೈರಸ್‌

ಕೊರೊನಾ ವೈರಸ್‌ನಿಂದಾಗಿ ಜಾಗತಿಕ ಹವಾಮಾನ ವೀಕ್ಷಣೆಯ ಮೇಲೆ ಉಂಟಾಗಬಹುದಾದ ಸಂಭವನೀಯ ವ್ಯತಿರಿಕ್ತ ಪರಿಣಾಮಗಳ ಕುರಿತು ವಿಶ್ವ ಹವಾಮಾನ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

corona
ಕೊರೊನಾ

By

Published : May 10, 2020, 4:39 PM IST

ಹೈದರಾಬಾದ್:‌ ಹವಾಮಾನ ವೀಕ್ಷಣೆ ಮತ್ತು ಮುನ್ಸೂಚನೆಯ ಪ್ರಮಾಣ, ಗುಣಮಟ್ಟ ನಿಗಾ ವ್ಯವಸ್ಥೆಯ ಮೇಲೆ ಕೋವಿಡ್‌-19 ಸಾಂಕ್ರಾಮಿಕ ರೋಗವು ಬೀರಬಹುದಾದ ಪರಿಣಾಮಗಳ ಕುರಿತು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ಕಳವಳ ವ್ಯಕ್ತಪಡಿಸಿದೆ.

ಪ್ರಸಕ್ತ ಕೋವಿಡ್‌-19 ವಿಸ್ಫೋಟದುದ್ದಕ್ಕೂ ಡಬ್ಲ್ಯೂಎಂಒ ಸಮನ್ವಯಿತ ಜಾಗತಿಕ ವೀಕ್ಷಣಾ ವ್ಯವಸ್ಥೆಯ ಒಟ್ಟಾರೆ ಆರೋಗ್ಯ ಮತ್ತು ಸಾಧನೆಗಳು ನಿರಂತರ ನಿಗಾದಲ್ಲಿವೆ. ಸಾಮಾನ್ಯ ಸಂದರ್ಭಕ್ಕೆ ಹೋಲಿಸಿದರೆ, ವಿಮಾನಗಳ ಮೂಲಕ ವಿಶಾಲ ಪ್ರಾದೇಶಿಕ ಏರಿಳಿತಗಳಲ್ಲಿ ನಡೆಸಲಾಗುತ್ತಿದ್ದ ಹವಾಮಾನ ಲೆಕ್ಕಾಚಾರಗಳ ಪ್ರಮಾಣವು ಶೇ 75ರಿಂದ 80ರಷ್ಟು ಕಡಿಮೆಯಾಗಿದೆ. ದಕ್ಷಿಣ ಗೋಳಾರ್ಧದಲ್ಲಿ ಈ ಕೊರತೆಯ ಪ್ರಮಾಣ ಹತ್ತಿರ ಶೇ 90ರಷ್ಟಿದ್ದು ಮೇಲ್ಮೈ ಹವಾಮಾನ ವೀಕ್ಷಣಾಲಯಗಳ ಮೂಲಕ ನಡೆಸುತ್ತಿದ್ದ ಹವಾಮಾನ ವೀಕ್ಷಣೆಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲಿಯೂ ಆಫ್ರಿಕಾ, ಅಮೆರಿಕದ ಕೇಂದ್ರ ಮತ್ತು ದಕ್ಷಿಣ ಭಾಗದಲ್ಲಿರುವ ಹಲವಾರು ಕೇಂದ್ರಗಳು ಸ್ವಯಂಚಾಲಿತ ವ್ಯವಸ್ಥೆ ಹೊಂದಿರದೆ ಕೇವಲ ಶಾರೀರಿಕ ವೀಕ್ಷಣೆಗಳನ್ನು ಹೊಂದಿದ್ದು, ಇಲ್ಲೆಲ್ಲಾ ವೀಕ್ಷಣೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇವೆಲ್ಲದರ ಮಧ್ಯೆಯೂ ರಾಷ್ಟ್ರೀಯ ಹವಾಮಾನ ಮತ್ತು ಜಲಸಂಬಂಧಿ ಸೇವೆಗಳು ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ ಡಬ್ಲ್ಯೂಎಂಒ ಪ್ರಧಾನ ಕಾರ್ಯದರ್ಶಿ ಪೆಟ್ಟೆರಿ ತಾಲಸ್.‌ ಆದರೆ, ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ, ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಈ ಸೇವೆಗಳು ಎದುರಿಸುತ್ತಿರುವ ಸವಾಲುಗಳು ಏರುಗತಿಯಲ್ಲಿವೆ.

“ಜೀವ ಮತ್ತು ಆಸ್ತಿ ರಕ್ಷಣೆಯಲ್ಲಿ ಅವರು ಹೊಂದಿರುವ ಸಮರ್ಪಣಾ ಭಾವಕ್ಕೆ ನಾವು ನಮಿಸುತ್ತೇವೆ. ಆದರೆ, ಅವರ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಮಿತಿಗಳ ಕುರಿತು ನಾವು ಕಳವಳಗೊಂಡಿದ್ದೇವೆ. ಹವಾಮಾನ ಬದಲಾವಣೆ ಮತ್ತು ಹವಾಮಾನ ಸಂಬಂಧಿ ಪ್ರಕೋಪಗಳ ಪ್ರಮಾಣದಲ್ಲಿ ನಿರಂತರ ಹೆಚ್ಚಳವಾಗುತ್ತಿರುವುದರ ಪರಿಣಾಮಗಳನ್ನು ಶಾಂತ ಮಹಾಸಾಗರದ ಉಷ್ಣವಲಯದ ಹೆರಲ್ಡ್‌ ಚಂಡಮಾರುತ ಹಾಗೂ ಪೂರ್ವ ಆಫ್ರಿಕಾದಲ್ಲಿ ಸಂಭವಿಸಿದ ಪ್ರವಾಹದಲ್ಲಿ ನಾವು ಗಮನಿಸಬಹುದು. ಅಟ್ಲಾಂಟಿಕ್‌ ಚಂಡಮಾರುತ ಋತುವನ್ನು ನಾವು ಸಮೀಪಿಸುತ್ತಿರುವಂತೆ ಕೋವಿಡ್-‌19 ಚಂಡಮಾರುತವು ಹೆಚ್ಚುವರಿ ಸವಾಲನ್ನು ಒಡ್ಡುತ್ತಿದೆ. ಪ್ರತಿಯೊಂದು ದೇಶದ ಮಟ್ಟದಲ್ಲಿಯೂ ಅದು ಬಹು ಆಯಾಮದ ಸಂಕಷ್ಟಗಳನ್ನು ಉಂಟು ಮಾಡುವ ಅಪಾಯವಿದೆ. ಆದ್ದರಿಂದ, ಪ್ರತಿಯೊಂದು ದೇಶವೂ ಪೂರ್ವ ಮುನ್ನೆಚ್ಚರಿಕೆ ಹಾಗೂ ಹವಾಮಾನ ವೀಕ್ಷಣಾ ಸಾಮರ್ಥ್ಯಗಳತ್ತ ಗಮನ ಹರಿಸಬೇಕು” ಎನ್ನುತ್ತಾರೆ ತಾಲಸ್.‌

ಅಭಿವೃದ್ಧಿ ಹೊಂದಿದ ಬಹುತೇಕ ದೇಶಗಳಲ್ಲಿ, ಮೇಲ್ಮೈ ಆಧರಿತ ಹವಾಮಾನ ವೀಕ್ಷಣಾಲಯಗಳು ಈಗ ಬಹುತೇಕ ಸ್ವಯಂಚಾಲಿತಗೊಂಡಿವೆ. ಅದಾಗ್ಯೂ, ಅಭಿವೃದ್ಧಿ ಹೊಂದುತ್ತಿರುವ ಹಲವಾರು ದೇಶಗಳಲ್ಲಿ ವೀಕ್ಷಣಾಲಯಗಳನ್ನು ಸ್ವಯಂಚಾಲಿತಗೊಳಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಹೀಗಾಗಿ, ಹವಾಮಾನ ವೀಕ್ಷಕರು ಶಾರೀರಿಕವಾಗಿ ನಡೆಸುವ ವೀಕ್ಷಣೆಗಳ ಮೇಲೆಯೇ ಹವಾಮಾನ ಸಮುದಾಯ ಅವಲಂಬಿಸಬೇಕಿದ್ದು, ಹೀಗೆ ಬರುವ ವೀಕ್ಷಣಾ ವಿವರಗಳನ್ನು ಅಂತಾರಾಷ್ಟ್ರೀಯ ಜಾಲಕ್ಕೆ ವರ್ಗಾಯಿಸಿ ಜಾಗತಿಕ ಹವಾಮಾನ ಮತ್ತು ವಾತಾವರಣ ಮಾದರಿಗಳಲ್ಲಿ ಬಳಸಲಾಗುತ್ತಿದೆ.

ಜಲ ಮೇಲ್ಮೈ ವೀಕ್ಷಣಾ ವ್ಯವಸ್ಥೆಗಳಿಂದ ಬರುವ ವೀಕ್ಷಣಾ ವರದಿಗಳ ಮೇಲೂ ಡಬ್ಲ್ಯೂಎಂಒ ನಿಗಾ ವಹಿಸಿದೆ. ಏಕೆಂದರೆ, ಭೂಮಿಯ ಮೂರನೇ ಎರಡು ಭಾಗ ಮಹಾಸಮುದ್ರಗಳ ನೀರಿನಿಂದ ಆವೃತವಾಗಿರುವುದರಿಂದ, ಈ ಭಾಗದ ಹವಾಮಾನ ಮಾಹಿತಿ ಮಹತ್ವ ಪಡೆದಿದೆ. ಇಂತಹ ಮಹಾಸಾಗರ ಆಧರಿತ ವೀಕ್ಷಣಾ ವ್ಯವಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದು, ಇನ್ನೂ ಕೆಲವು ತಿಂಗಳುಗಳ ಮಟ್ಟಿಗೆ ಈ ಪೈಕಿ ಬಹುತೇಕ ವೀಕ್ಷಣಾಲಯಗಳು ಚೆನ್ನಾಗಿ ಕೆಲಸ ಮಾಡುವ ನಿರೀಕ್ಷೆಯಿದೆ. ಈ ಪೈಕಿ ಅತ್ಯಂತ ಮಹತ್ವದ ಪರಿಣಾಮ ಉಂಟಾಗುವುದು ಸ್ವಯಂ ವೀಕ್ಷಣಾ ನೌಕೆಗಳ (ವಿಒಎಸ್)‌ ಯೋಜನೆಗಳ ಮೇಲಿದ್ದು, ಸಾಮಾನ್ಯ ಹಂತಗಳಿಗೆ ಹೋಲಿಸಿದಲ್ಲಿ ದತ್ತಾಂಶ ಲಭ್ಯತೆಯಲ್ಲಿ ಶೇಕಡಾ 20ರಷ್ಟು ಕೊರತೆಯನ್ನು ಇಲ್ಲಿ ಕಾಣಬಹುದಾಗಿದೆ. ಸಕಾರಾತ್ಮಕ ಅಂಶವೆಂದರೆ, ಬಾಹ್ಯಾಕಾಶ ಆಧರಿತ ವೀಕ್ಷಣಾ ವ್ಯವಸ್ಥೆಯ ಪ್ರಾಮುಖ್ಯತೆ ಮತ್ತು ಸ್ಥಿರತೆಯನ್ನು ಪ್ರಸಕ್ತ ಸನ್ನಿವೇಶವು ಉತ್ತಮವಾಗಿ ಬಿಂಬಿಸಿರುವುದು. ಈ ಮಾಹಿತಿಯ ಮೇಲೆ ಡಬ್ಲ್ಯೂಎಂಒ ಅವಲಂಬನೆಯೂ ಹೆಚ್ಚುತ್ತಿದೆ. ಪ್ರಸಕ್ತ ಈ ವ್ಯವಸ್ಥೆಯಡಿ 30 ಹವಾಮಾನ ಹಾಗೂ 200 ಸಂಶೋಧನಾ ಉಪಗ್ರಹಗಳಿದ್ದು, ಅತ್ಯುತ್ಕೃಷ್ಟ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ನಿರಂತರವಾಗಿ ವೀಕ್ಷಣಾ ವಿವರಗಳನ್ನು ರವಾನಿಸಲಾಗುತ್ತದೆ.

ಡಬ್ಲ್ಯೂಎಂಒದ 193 ಸದಸ್ಯ ರಾಷ್ಟ್ರಗಳು ಮತ್ತು ಪ್ರದೇಶಗಳು ತಮ್ಮ ನಾಗರಿಕರಿಗೆ ಒದಗಿಸುವ ಎಲ್ಲಾ ಹವಾಮಾನ ಮತ್ತು ವಾತಾವರಣ ಸೇವೆಗಳು ಹಾಗೂ ಉತ್ಪನ್ನಗಳಿಗೆ ವಿಶ್ವ ಹವಾಮಾನ ವೀಕ್ಷಣಾ ಸಂಸ್ಥೆಯ ಜಾಗತಿಕ ವೀಕ್ಷಣಾ ವ್ಯವಸ್ಥೆಯು ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ ಎಂಬುದೇ ಇಲ್ಲಿ ಹೆಚ್ಚು ಔಚಿತ್ಯಪೂರ್ಣ. ವಾತಾವರಣದ ಪರಿಸ್ಥಿತಿ, ಮಹಾಸಾಗರಗಳ ಮೇಲ್ಮೆ ಕುರಿತ ವೀಕ್ಷಣೆಗಳನ್ನು ನೆಲ, ಜಲ ಹಾಗೂ ಬಾಹ್ಯಾಕಾಶ ಆಧರಿತ ಸಾಧನಗಳ ಮೂಲಕ ಅದು ಒದಗಿಸುತ್ತದೆ. ಹವಾಮಾನ ವಿಶ್ಲೇಷಣೆಗಳು, ಮುನ್ನೆಚ್ಚರಿಕೆಗಳು, ಸಲಹೆಗಳು ಹಾಗೂ ಎಚ್ಚರಿಕೆಗಳನ್ನು ಸಿದ್ಧಪಡಿಸಲು ಈ ದತ್ತಾಂಶವನ್ನು ಬಳಸಲಾಗುತ್ತಿದೆ.

ABOUT THE AUTHOR

...view details