ನವದೆಹಲಿ:ಕೊರೊನಾ ಸಾಂಕ್ರಾಮಿಕದ ಮಧ್ಯೆಯೂ ತನ್ನ ಹಳೆ ಚಾಳಿ ಮುಂದುವರೆಸಿರುವ ಚೀನಾ, ಗಡಿಯಲ್ಲಿ ಕ್ಯಾತೆ ನಡೆಸುತ್ತಿದೆ. ಲಡಾಕ್ ವ್ಯಾಪ್ತಿಯ ಗಡಿ ನಿಯಂತ್ರಣ ರೇಖೆಯ ವಿವಿಧ ಭಾಗಗಳಲ್ಲಿ ಸುಮಾರು 5,000 ಸೈನಿಕರನ್ನು ನಿಯೋಜನೆ ಮಾಡಿದೆ.
ಗಡಿಯಲ್ಲಿ ಚೀನಾ ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿದ ಬೆನ್ನಲ್ಲೇ ಭಾರತ ಕೂಡ ನಿಯಂತ್ರಣ ರೇಖೆಯ ಬಳಿ ಸೈನಿಕರನ್ನು ನಿಯೋಜಿಸಿದೆ. ದೌಲತ್ ಬೇಗ್ ಓಲ್ಡಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಾರತೀಯ ಸೇನೆಯ 81 ಮತ್ತು 114 ಬ್ರಿಗೇಡ್‌ಗಳ ಅಡಿಯಲ್ಲಿರುವ ಪ್ರದೇಶಗಳಲ್ಲಿ ಯೋಧರ ಸಂಖ್ಯೆ ಹೆಚ್ಚಿಸಲಾಗಿದೆ.
ಪಾಂಗೊಂಗ್ ತ್ಸೊಸರೋವರ ಮತ್ತು ಫಿಂಗರ್ ಏರಿಯಾ ಬಳಿ ಚೀನಿ ಸೈನ್ಯ ಮತ್ತು ಭಾರೀ ವಾಹನಗಳು ಚಲಿಸಿವೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಗಾಲ್ವಾನ್ ನಾಲಾ ಪ್ರದೇಶದಲ್ಲಿ ಚೀನಿಯರು ಭಾರತೀಯ ಕೆಎಂ 120 ಪೋಸ್ಟ್ನಿಂದ ಸುಮಾರು 10-15 ಕಿ.ಮೀ ದೂರದಲ್ಲಿ ಓಡಾಟ ನಡೆಸಿದ್ದು, ಟೆಂಟ್ ಹಾಕಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ಸ್ಥಾನಗಳಿಗೆ ಎದುರಾಗಿರುವ ಪ್ರದೇಶದಲ್ಲಿ ಚೀನಿಯರು ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೀನಾ ಕ್ರಮಕ್ಕೆ ಭಾರತ ಆಕ್ಷೇಪಣೆ ವ್ಯಕ್ತಪಡಿಸಿದರೂ ತಮ್ಮ ಕಾರ್ಯ ಮುಂದುವರೆಸಿದೆ. ಇತ್ತ ಗಾಲ್ವಾನ್ ಪ್ರದೇಶದಲ್ಲಿ ಭಾರತೀಯ ಸೇನೆಯು ಗಲ್ವಾನ್ ನಾಲಾದ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಸೇತುವೆಯನ್ನು ನಿರ್ಮಿಸುತ್ತಿದೆ. ಇದಕ್ಕೆ ಚೀನೀಯರು ಆಕ್ಷೇಪಣೆ ಎತ್ತಿದ್ದು, ಆ ಪ್ರದೆಶದಲ್ಲಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದ್ದಾರೆ.
ಪೂರ್ವ ಲಡಾಕ್ ವಲಯದಲ್ಲಿ ಚೀನಾದ ಬಲಕ್ಕೆ ಸರಿಹೊಂದುವಂತೆ ಮೀಸಲು ಮತ್ತು ಇತರ ಪ್ರದೇಶಗಳಿಂದ ಸೈನ್ಯವನ್ನು ಸಾಗಿಸಲು ಭಾರತವು ದೌಲತ್ ಬೇಗ್ ಓಲ್ಡಿ ಸೆಕ್ಟರ್‌ನಲ್ಲಿನ ವಾಯುನೆಲೆಯನ್ನು ಬಳಸುತ್ತಿದೆ.