ನವದೆಹಲಿ:ವಿಶ್ವ ಹುಲಿ ದಿನವಾದ ಇಂದು ಪ್ರಧಾನಿ ಮೋದಿ ಸದ್ಯ ಭಾರತದಲ್ಲಿರುವ ಒಟ್ಟಾರೆ ಹುಲಿಗಳ ಅಂಕಿ-ಅಂಶ ಬಿಡುಗಡೆ ಮಾಡುವುದರ ಜೊತೆಗೆ ಭಾರತ ಹುಲಿಗಳ ವಾಸಕ್ಕೆ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ತಾಣ ಎಂದು ಹೇಳಿದ್ದಾರೆ.
ಪ್ರಸ್ತುತ ಭಾರತದಲ್ಲಿ ಸುಮಾರು ಮೂರು ಸಾವಿರ ಹುಲಿಗಳಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಹುಲಿಗಳ ಸಂಖ್ಯೆ ಏರಿಕೆಯಲ್ಲಿದೆ ಎನ್ನುವ ವಿಚಾರವನ್ನು ಪ್ರಧಾನಿ ಮೋದಿ 2018ರ 'ಆಲ್ ಇಂಡಿಯಾ ಟೈಗರ್ ಎಸ್ಟಿಮೇಷನ್' ವರದಿಯನ್ನು ಬಿಡುಗಡೆ ಮಾಡಿ ಹೇಳಿದ್ದಾರೆ. 2014ರಲ್ಲಿ 1,400 ಇದ್ದ ಹುಲಿಗಳ ಸಂಖ್ಯೆ 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ತಮ್ಮ ಭಾಷಣದಲ್ಲಿ ಸಲ್ಮಾನ್ ಖಾನ್ ಚಿತ್ರವನ್ನು ಹುಲಿಗಳ ಸಂರಕ್ಷಣೆಯನ್ನು ಹೋಲಿಕೆ ಮಾಡಿದ ಪ್ರಧಾನಿ ಮೋದಿ, ಹುಲಿಗಳ ಸಂಖ್ಯೆ ಹಾಗೂ ರಕ್ಷಣೆ, 'ಏಕ್ ಥಾ ಟೈಗರ್' ಎನ್ನುವ ಮೂಲಕ ಆರಂಭವಾಗಿ ಸದ್ಯ 'ಟೈಗರ್ ಜಿಂದಾ ಹೇ' ಎನ್ನುವ ಹಂತಕ್ಕೆ ತಲುಪಿದ್ದೇವೆ ಎಂದು ಹೇಳಿದ್ದಾರೆ.
ಹುಲಿಗಳ ಸಂಖ್ಯೆಯಲ್ಲಿ ರಾಜ್ಯವಾರು ವಿಂಗಡಣೆಯಲ್ಲಿ ಕಳೆದ ಕೆಲ ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಕರ್ನಾಟಕ ಸದ್ಯದ ಅಂಕಿ-ಅಂಶದ ಪ್ರಕಾರ ಮೊದಲ ಸ್ಥಾನದಿಂದ ಕೆಳಕ್ಕಿಳಿದಿದೆ. 526 ಹುಲಿಗಳೊಂದಿಗೆ ಮಧ್ಯ ಪ್ರದೇಶ ಅಗ್ರಸ್ಥಾನಕ್ಕೇರಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 524 ಹುಲಿಗಳಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 442 ಹುಲಿಗಳು ವಾಸಿಸುತ್ತಿವೆ.
ಹುಲಿ ರಕ್ಷಣೆ ಮತ್ತು ಸಂಖ್ಯೆ ಹೆಚ್ಚಳಕ್ಕೆ ಕೈಗೊಳ್ಳಬಹುದಾದ ಕಾರ್ಯಕ್ಕಾಗಿ ಪ್ರತಿವರ್ಷ ಜುಲೈ 29 ಅನ್ನು ವಿಶ್ವ ಹುಲಿ ದಿನವಾಗಿ ಆಚರಿಸಲಾಗುತ್ತದೆ.