ನವದೆಹಲಿ :ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು 91ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಮವಾರ 91ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಾಲಿವುಡ್ ಸೇರಿ ಇತರ ಖ್ಯಾತ ನಟ-ನಟಿಯರು ಲತಾತಾಯಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಹಿರಿಯ ಗಾಯಕಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿರುವ ನಟಿ ಕಂಗನಾ ರಣಾವತ್ ಹಾಗೂ ಗಾಯಕ ಶಂಕರ್ ಮಹಾದೇವನ್, ಅವರು ನಮ್ಮೆಲ್ಲರಿಗೂ ಬಹುದೊಡ್ಡ ಸ್ಫೂರ್ತಿ ಎಂದು ಅವರ ಸಾಧನಾ ಹಾದಿಯನ್ನು ಕೊಂಡಾಡಿದ್ದಾರೆ.
ಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್ ಅವರು ಲತಾ ಮಂಗೇಶ್ಕರ್ ಅವರೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
"ಲತಾ ಮಂಗೇಶ್ಕರ್ ದೀದಿಗೆ ಜನ್ಮ ದಿನದ ಶುಭಾಶಯಗಳು, ಪ್ರತಿ ಹೃದಯಕ್ಕೂ ಇಂಪು ನೀಡು ನೀಡುವ ನಿಮ್ಮ ಮಧುರ ಧ್ವನಿಯನ್ನು ನಾನು ಕೇಳದೇ ಅಂದಿನ ದಿನವನ್ನು ಕಳೆಯಲಾರೆ. ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ನಿಮಗೆ ಆಶೀರ್ವದಿಸಲಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ನಟ ರಿತೀಶ್ ದೇಶ್ಮುಖ್, ಆಶಾ ಭೋಂಸ್ಲೆ ಸೇರಿ ಬಾಲಿವುಡ್ ಸೆಲೆಬ್ರಿಟಿಗಳಲ್ಲದೇ ರಾಜಕೀಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯಾಗಿ ಲತಾ ಮಂಗೇಶ್ಕರ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಹಲವರು ತಮ್ಮ ಟ್ವಿಟರ್ ಖಾತೆಯಲ್ಲಿ ಅವರೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡಿ ಅವರ ಸುಮಧುರ ಧ್ವನಿಯಿಂದ ಮೂಡಿ ಬಂದಿರುವ ಹಾಡುಗಳನ್ನು ಮೆಲುಕು ಹಾಕಿದ್ದಾರೆ.
1929ರ ಸೆ.28ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಜನಿಸಿದ ಲತಾ ಮಂಗೇಶ್ಕರ್ ಅವರು ಇಂದಿಗೆ 91 ವರ್ಷ ಪೂರೈಸಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಭಾರತ ರತ್ನ, ಪದ್ಮ ಪ್ರಶಸ್ತಿ ಸೇರಿ ಸಾವಿರಾರು ಪ್ರಶಸ್ತಿಗಳು ಸಂದಿವೆ.