ನವದೆಹಲಿ:ದೇಶದ ಇತರೆ ರಾಜ್ಯಗಳಂತೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಓಮರ್ ಅಬ್ದುಲ್ಲ ಖಂಡಿಸಿದ್ದಾರೆ.
ದೇಶದ ಇತರೆ ಭಾಗಗಳಲ್ಲಿ ಇಂತಹ ವಿಂಗಡಣೆಯಾಗುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ವಿಂಗಡಣೆಗೆ ಮುಂದಾದರೆ ನಮ್ಮ ಪಕ್ಷ ಬಲವಾಗಿ ಖಂಡಿಸುತ್ತದೆ. ರಾಜ್ಯದ ಜನರ ಒಪ್ಪಿಗೆ ಇಲ್ಲದೆಯೇ ಇಂತಹ ನಿರ್ಧಾರ ಮಾಡಿದರೆ ನಾವು ವಿರೋಧೀಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಇತರೆ ರಾಜ್ಯಗಳಿಗಿಂತ ಭಿನ್ನವಾಗಿದೆ. ಆದರೆ ಇಲ್ಲಿನ ವಿಶೇಷ ಸ್ಥಾನಮಾನದ 370 ಹಾಗೂ 35ಎ ಕಲಂಗಳನ್ನು ರದ್ದುಪಡಿಸಿ, ಇತರೆ ರಾಜ್ಯಗಳಂತೆಯೇ ಕಾಣುತ್ತೇವೆ ಎಂದು ಬಿಜೆಪಿ ಹೇಳಿದೆ. ಹೀಗಿರುವಾಗ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ನಿರ್ಧಾರ ನಮಗೇನು ಆಶ್ಚರ್ಯ ಎನಿಸಿಲ್ಲ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳ ವಿಂಗಡಣೆಯನ್ನು ತಟಸ್ಥಗೊಳಿಸುವಂತೆ ಇಲ್ಲಿನ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಸಹ ಹೇಳಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇನ್ನು ಪಿಡಿಪಿ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬ್ ಮುಫ್ತಿ ಸಹ ಈ ನಿರ್ಧಾರವನ್ನು ಖಂಡಿಸಿದ್ದು, ಈ ವಿಂಗಡಣೆ ಧಾರ್ಮಿಕತೆ ಆಧಾರದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ವಿಭಜನೆ ಮಾಡಿದಂತೆ. ಹಳೆಯ ಗಾಯಗಳಿಗೆ ಮುಲಾಮು ಹಚ್ಚುವ ಬದಲು ಕೇಂದ್ರ ಸರ್ಕಾರ ಕಾಶ್ಮೀರಿಗರಿಗೆ ಮತ್ತಷ್ಟು ನೋವು ನೀಡುತ್ತಿದೆ ಎಂದಿದ್ದಾರೆ.
ನಿನ್ನೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ, ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೂ ಇದು ಅನ್ವಯಿಸಲಿದೆ ಎಂಬುದನ್ನು ಅಲ್ಲಿನ ಹೋರಾಟಗಾರ ಸುಶೀಲ್ ಪಂಡಿತ್ ಸ್ವಾಗತಿಸಿದ್ದಾರೆ. ಜಮ್ಮುವಿನ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 65,000 ಜನರಿದ್ದರೆ. ಕಾಶ್ಮೀರದಲ್ಲಿ 42,000-43,000 ಜನರಿದ್ದಾರೆ. ಹೀಗಾಗಿ ಜಮ್ಮುವಿನಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದ್ದಾರೆ.