ಪಾಟ್ನಾ (ಬಿಹಾರ): ಮುಂಗಾರು ಆಗಮನವಾಗುತ್ತಿದ್ದಂತೆ ಪಾಟ್ನಾ ನಗರದ ನಿವಾಸಿಗಳು ಚಿಂತಾಕ್ರಾಂತರಾಗಿದ್ದು, ಕಳೆದ ವರ್ಷ 40 ಜನರನ್ನು ಬಲಿ ತೆಗದುಕೊಂಡ ಭೀಕರ ಪ್ರವಾಹವನ್ನು ನೆನೆದು ಭಯಭೀತರಾಗಿದ್ದಾರೆ.
ಜನರ ಬದುಕನ್ನು ನುಚ್ಚುನೂರು ಮಾಡಿದ ಭೀಕರ ಪ್ರವಾಹ ಊರುಗಳನ್ನೇ ಮುಳುಗಿಸಿತ್ತು. ಜನರು ಹೊರ ಹೋಗಲಾಗದೆ ಗೃಹ ಬಂಧನದಲ್ಲಿದ್ದರು. ಈ ಪ್ರವಾಹ ಪರಿಸ್ಥಿತಿಯು ಅಭಿವೃದ್ದಿಯ ಹೆಸರು ಹೇಳಿಕೊಂಡು ಜನರ ಕಣ್ಣಿಗೆ ಮಣ್ಣೆರಚಿ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದ ಸರ್ಕಾರ, ಜನಪ್ರತಿನಿಧಿಗಳ ಬಣ್ಣವನ್ನು ಸ್ಪಷ್ಟವಾಗಿ ಬಯಲು ಮಾಡಿತ್ತು. ಪ್ರವಾಹ ಬಂದು ಹೋಗಿ 8 ತಿಂಗಳು ಕಳೆದಿದೆ. ಇದೀಗ ಮತ್ತೆ ಮಳೆ ಆರಂಭವಾಗಿದೆ. ಹಾಗಾದರೆ, ಕಳೆದ ವರ್ಷದ ಪ್ರವಾಹದಿಂದ ಸರ್ಕಾರ ಏನು ಪಾಠ ಕಳಿತಿದೆ? ಈ ವರ್ಷ ಪ್ರವಾಹ ಬಾರದಂತೆ ತಡೆಗಟ್ಟಲು ಕೈಗೊಂಡ ಕ್ರಮಗಳೇನು?
ಪಾಟ್ನಾ ಬಟ್ಟಲಿನಂತಿರುವುದೇ ಪ್ರವಾಹಕ್ಕೆ ಕಾರಣವೇ?:
ತಜ್ಞರ ಪ್ರಕಾರ, ಪಾಟ್ನಾ ಒಂದು ಬಟ್ಟಲಿನಂತಿದೆ. ಸುತ್ತಲೂ ಎತ್ತರದ ಪ್ರದೇಶಗಳು ಮತ್ತು ನಡುವೆ ತಗ್ಗು ಪ್ರದೇಶಗಳಿವೆ. ತಗ್ಗು ಪ್ರದೇಶಗಳಾದ ರಾಜೇಂದ್ರ ನಗರ, ಕಂಕರ್‌ಬಾಗ್, ಬಿಯೂರ್ ಮತ್ತು ಕುಮ್ರಾರ್ ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಲು ಇದು ಕಾರಣ. ಕಳೆದ ವರ್ಷದ ಭೀಕರ ಪ್ರವಾಹದ ಸಂದರ್ಭದಲ್ಲಿ ಸ್ವತಃ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರು ರಾಜೇಂದ್ರ ನಗರದ ತಮ್ಮ ಖಾಸಗಿ ನಿವಾಸದಲ್ಲಿ ಹಲವು ದಿನ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ಮತ್ತು ಕುಟುಂದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅದೇ ರೀತಿ ಅನೇಕ ಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಹಲವು ದಿನಗಳವರೆಗೆ ಮನೆಯಿಂದ ಹೊರ ಬರಲಾರದೆ ಸಿಲುಕಿಕೊಂಡಿದ್ದರು.