ನವದೆಹಲಿ:ಪುಲ್ವಾಮ ಉಗ್ರ ದಾಳಿ ಹಾಗೂ ಆನಂತರ ನಡೆದ ಬಾಲಾಕೋಟ್ ದಾಳಿಯಿಂದಾಗಿ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಹಳಸಿದೆ. ಈ ಎರಡು ಘಟನೆಗಳಿಂದಾಗಿ ಉಭಯ ದೇಶಗಳ ನಾಯಕರು ಪರಸ್ಪರ ಮುಖ ಕೊಟ್ಟು ಮಾತನಾಡದಷ್ಟು ಅಸಮಾಧಾನ ಉಂಟಾಗಿದೆ. ಈ ಮಧ್ಯೆ ಜೂನ್ ತಿಂಗಳಲ್ಲಿ ಕಿರ್ಗಿಸ್ತಾನದ ಬಿಶ್ಕೇಕ್ ನಗರದಲ್ಲಿ ಉಭಯ ನಾಯಕರು ಪಾಲ್ಗೊಳ್ಳುತ್ತಿರುವುದು ಕುತೂಹಲ ಹುಟ್ಟುಹಾಕಿದೆ.
ಕಿರ್ಗಿಸ್ತಾನದ ಬಿಶ್ಕೇಕ್ನಲ್ಲಿ ನಡೆಯು ಶಾಂಘೈ ಕೊ ಆಪರೇಟೀವ್ ಆರ್ಗನೈಸೇಷನ್ (SCO) ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಭಾಗವಹಿಸುತ್ತಿದ್ದಾರೆ. ಆದರೆ, ಇಬ್ಬರೂ ಪರಸ್ಪರ ಮಾತುಕತೆ ನಡೆಸುವರೇ? ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.
ಭಾರತದ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರರ ದಾಳಿಯಿಂದಾಗಿ ಇಲ್ಲಿನ ಸರ್ಕಾರವು, ಪಾಕ್ನೊಂದಿಗೆ ಕೂತು ಮಾತನಾಡುವ ಎಲ್ಲಾ ಅವಕಾಶಗಳನ್ನು ಮುಂದೂಡುತ್ತಲೇ ಬಂದಿದೆ. ಪುಲ್ವಾಮದಲ್ಲಿ ಉಗ್ರ ನಡೆಸಿದ ಭೀಕರ ದಾಳಿ, ಆನಂತರ ಪಾಕ್ ಆಕ್ರಮಿತ ಪ್ರದೇಶ ಬಾಲಕೋಟ್ನಲ್ಲಿ ಭಾರತ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯಿಂದ ಯಾವ ಮಾತುಕತೆಯೂ ಸಾಧ್ಯವಾಗಿಲ್ಲ. ಆದರೆ, ಪಾಕಿಸ್ತಾನ ಮಾತ್ರ ಏನೇ ಆದರೂ ಶಾಂತಿ ಮಾತುಕತೆಗೆ ಆಹ್ವಾನಿಸುತ್ತಲೇ ಇದೆ.
ಇತ್ತೀಚೆಗೆ ಹೊರಬಿದ್ದ ಲೋಕಸಭೆ ಚುನಾವಣೆ ಫಲಿತಾಂಶದಂತೆ ಮೋದಿ ಎರಡನೇ ಬಾರಿ ಅಭೂತಪೂರ್ವ ಜಯ ಗಳಿಸಿದ್ದಾರೆ. ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಸಹ ದೂರವಾಣಿ ಮೂಲಕ ಶುಭಾಶಯ ಕೋರಿದ್ದಾರೆ. ಟ್ವೀಟ್ ಮೂಲಕವೂ ಶುಭ ಕೋರಿದ್ದ ಇಮ್ರಾನ್ಗೆ, ಮೋದಿ ಸಹ ಧನ್ಯವಾದ ಹೇಳಿದ್ದಾರೆ. ಈ ವೇಳೆ ಇಬ್ಬರು ನಾಯಕರಿಂದ ಮತ್ತೆ ಶಾಂತಿಮಂತ್ರ ಪಠನವಾಗಿದೆ. ಇದರಿಂದಲೇ ಬಿಶ್ಕೇಕ್ ಸಭೆಯಲ್ಲಿ ಪ್ರಧಾನಿದ್ವಯರು ಮಹತ್ವದ ಮಾತಕತೆಗೆ ಮುಂದಾಗುವರೇ ಎಂಬ ಚರ್ಚೆ ಭರ್ಜರಿಯಾಗೇ ನಡೆಯುತ್ತಿದೆ