ನವದೆಹಲಿ: ದೆಹಲಿ ಹಿಂಸಾಚಾರದಲ್ಲಿ ಪಾಲ್ಗೊಂಡವರ ಜಾತಿ, ಧರ್ಮ, ಪಕ್ಷದ ಆಧಾರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಗಲಭೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗವುದು. ಗಲಭೆಯಲ್ಲಿ ಪಾಲ್ಗೊಳ್ಳುವವರಿಗೆ ಏನಾಗುತ್ತದೆ ಎಂಬುದರ ಕುರಿತು ಇದು ಇಡೀ ದೇಶಕ್ಕೆ ಪಾಠವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದರು.
ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ದೆಹಲಿ ಪೊಲೀಸರನ್ನು ನಿಷ್ಕ್ರೀಯಗೊಳಿಸಿದ ಆರೋಪವನ್ನು ಅಮಿತ್ ಶಾ ಎದುರಿಸುತ್ತಿದ್ದಾರೆ. ಈ ಟೀಕೆಗಳಿಗೆ ಲೋಕಸಭೆಯಲ್ಲಿ ವಿವರಣಾತ್ಮಕ ಪ್ರತ್ಯುತ್ತರ ನೀಡಿದರು.
ಗಲಭೆಯನ್ನು 36 ಗಂಟೆಗಳಲ್ಲಿ ಶಾಂತಗೊಳಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 2,647 ಜನರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಾಹಿತಿ ಕೊಟ್ಟು ಅಂದಿನ ಘಟನಾವಳಿಗಳನ್ನು ವಿವರಿಸುತ್ತಾ ಹೋದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮವನ್ನು ಮೊದಲೇ ನಿಗದಿಪಡಿಸಲಾಗಿತ್ತು. ಅದು ನನ್ನ ಕ್ಷೇತ್ರದಲ್ಲಿತ್ತು. ಅಲ್ಲಿ ನನ್ನ ಭೇಟಿ ಕೂಡ ಪೂರ್ವನಿಗದಿಯಾಗಿತ್ತು. ಮರುದಿನ, ಟ್ರಂಪ್ ಅವರು ದೆಹಲಿಗೆ ಭೇಟಿ ನೀಡಿದಾಗ ನಾನು ಯಾವುದೇ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ. ಆ ದಿನ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಕುಳಿತಿದ್ದೆ. ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ಮಾಡಲು ಎನ್ಎಸ್ಎಗೆ ಮಾತ್ರ ವಿನಂತಿಸಿದೆ. ನನ್ನ ಭದ್ರತೆ ಬಗ್ಗೆ ಪೊಲೀಸರು ಗಮನ ನೀಡಬಾರದು ಎಂಬ ಕಾರಣಕ್ಕಾಗಿ ನಾನು ಸ್ಥಳಕ್ಕೆ ಭೇಟಿ ನೀಡಲಿಲ್ಲ ಎಂದು ಅವರು ತಿಳಿಸಿದರು.
ದೆಹಲಿ ಜನರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ನನ್ನ ಕೋರಿಕೆಯ ಮೇರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಹೋಳಿ ನಂತರ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚಿಸಲು ನಾವು ಬಯಸಿದ್ದೇವೆ. ಹಬ್ಬದ ಸಮಯದಲ್ಲಿ ಕೋಮು ಜ್ವಾಲೆ ಹೆಚ್ಚಾಗುವುದನ್ನು ತಪ್ಪಿಸಿ ಎಂದು ಅಮಿತ್ ಶಾ ಇದೇ ವೇಳೆ ಮನವಿ ಮಾಡಿದರು.