ಹೈದರಾಬಾದ್: ಎಎನ್ 32 ಸೇನಾ ವಿಮಾನವು ಅರುಣಾಚಲಪ್ರದೇಶದಲ್ಲಿ ಪತನಗೊಂಡು, 13 ವಾಯುಪಡೆ ಅಧಿಕಾರಿಗಳು ಮೃತಪಟ್ಟಂಥ ಕರಾಳ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವ ಹೇಳಿದ್ದಾರೆ.
ಸದ್ಯ ನಮಗೆ ವಿಮಾನದಲ್ಲಿದ್ದ ಡೇಟಾ ರೆಕಾರ್ಡ್ ಹಾಗೂ ಕಾಕ್ಪಿಟ್ನ ವಾಯ್ಸ್ ರೆಕಾರ್ಡ್ ಸಿಕ್ಕಿದೆ. ಇವುಗಳ ಮೂಲಕ ನಿಜವಾಗಿ ಆಗಿದ್ದೇನು? ವಿಮಾನ ಪತನಕ್ಕೆ ಕಾರಣವೇನೆಂಬುದನ್ನು ಕಂಡುಕೊಳ್ಳಲಾಗುತ್ತದೆ ಎಂದರು.
ಅರುಣಾಚಲ ಪ್ರದೇಶದಲ್ಲಿ ಬಹುತೇಕ ಅಪೇಕ್ಷಿಸಲಾಗದ ವಾತಾವರಣವಿರುತ್ತೆ. ವಿಮಾನ ಹಾರಾಟದ ಸಂದರ್ಭದಲ್ಲಿ ದಟ್ಟ ಮೋಡ ಆವರಿಸಿದ ವಾತಾವರಣವಿರುತ್ತದೆ. ವಾಯುಪಡೆಗೇ ಅಲ್ಲ, ಇತರೆ ವಿಮಾನಗಳು ಸಾಗಲು ಸಹ ಇದು ಕಷ್ಟಕರವಾಗಿರುತ್ತೆ. ಪವನ್ ಹನ್ಸ್ ಸೇರಿದಂತೆ ಹಲವು ಅಪಘಾತಗಳು ನಿಯಂತ್ರಣ ತಪ್ಪಿಯೇ ಸಂಭವಿಸಿವೆ ಎಂದು ಅವರು ವಿವರಿಸಿದರು.
ಜೂನ್ 3ರಂದು ಅಸ್ಸೋಂ ಜೊಹ್ರಾತ್ನಿಂದ ಹೊರಟ ಸೇನಾ ವಿಮಾನ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ವಾರಗಳ ಕಾಲ ನಡೆದ ಹುಡುಕಾಟ ಪರಿಣಾಮ ವಿಮಾನದ ಸುಳಿವೇ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ವಿಮಾನದಲ್ಲಿದ್ದ 13 ಮಂದಿ ಬದುಕಿಲ್ಲ ಎಂದು ವಾಯುಪಡೆ ಅಧಿಕೃತವಾಗಿ ಹೇಳಿತ್ತು. ಇದೀಗ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.