ಮುಂಬೈ: ಮೀಸಲಾತಿ ಸಮಸ್ಯೆಯಿಂದ ವೈದ್ಯಕೀಯ ಸೀಟ್ ಸಿಗದಕ್ಕೆ ಮಹಾರಾಷ್ಟ್ರದ ಬೀಡ್‌ನಲ್ಲಿ ಮರಾಠ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು "ದುರಂತ" ಎಂದು ಹೇಳಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ ಪಾರ್ಥ್ ಪವಾರ್, ಮರಾಠ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವಿವೇಕ್ ರಹಡೆ ಎಂಬ ಯುವಕನ ದುರಂತ ಸಾವು ವಿಷಾದನೀಯ ಎಂದಿದ್ದು, ಮೀಸಲಾತಿ ವಿಚಾರದಲ್ಲಿ ಮರಾಠ ಸಮುದಾಯದ ಮುಖಂಡರು ಧ್ವನಿಯೆತ್ತಬೇಕು ಮತ್ತು ಹೋರಾಟಕ್ಕೆ ಮುಂದಾಗಬೇಕು ಎಂದಿದ್ದಾರೆ. ಅಲ್ಲದೆ, ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಯ 'ಮಹಾ ವಿಕಾಸ್ ಅಗಾಡಿ ಸರ್ಕಾರ' ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಮೃತ ವಿವೇಕ್ ನಮ್ಮ ಮನಸ್ಸಿನಲ್ಲಿ ಹಚ್ಚಿದ ಬೆಂಕಿಯ ಕಿಡಿ ಇಡೀ ವ್ಯವಸ್ಥೆಯನ್ನು ಸುಟ್ಟು ಹಾಕುತ್ತದೆ. ಇಡೀ ಪೀಳಿಗೆಯ ಭವಿಷ್ಯವು ಅಪಾಯದಲ್ಲಿದೆ. ಗೌರವಾನ್ವಿತ ನ್ಯಾಯಾಲಯಕ್ಕೆ ಮರಾಠ ಮೀಸಲಾತಿಯ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅರ್ಜಿ ಸಲ್ಲಿಸುವುದು ಹೊರತು ನನಗೆ ಬೇರೆ ದಾರಿಯಿಲ್ಲ. ಮರಾಠ ಮೀಸಲಾತಿ ಎಂಬ ಜ್ವಾಲೆಯನ್ನು ಹೃದಯದಲ್ಲಿಟ್ಟು ಕೊಂಡೊಯ್ಯಲು ನಾನು ಸಿದ್ದನಿದ್ದೇನೆ. ನ್ಯಾಯದ ಕದ ತಟ್ಟುವ ಮೂಲಕ ಲಕ್ಷಾಂತರ ವಿವೇಕ್ಗಳಿಗೆ ನ್ಯಾಯ ಒದಗಿಸುತ್ತೇನೆ ಎಂದು ಪಾರ್ತ್ ಹೇಳಿದ್ದಾರೆ. ಮೃತ ವಿವೇಕ್ನ ಪೋಟೋಗಳು ಮತ್ತು ಡೆತ್ ನೋಟ್ನನ್ನು ತನ್ನ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ಬಿಡ್ನ ಯುವಕ ವಿವೇಕ್, ರಾಷ್ಟ್ರೀಯ ಅರ್ಹತಾ ಪರೀಕ್ಷೆ( ನೀಟ್) ಯಲ್ಲಿ ಉತ್ತೀರ್ಣಗೊಂಡಿದ್ದ. ಆದರೆ, ಮಿಸಲಾತಿ ಕಾರಣದಿಂದ ಆತನಿಗೆ ವೈದ್ಯಕೀಯ ಸೀಟ್ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿವೇಕ್ ಸಾವು ಮರಾಠ ಮೀಸಲಾತಿ ಹೋರಾಟದ ಧ್ವನಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮರಾಠಿಗರಿಗಾಗಿ ಮಹಾ ಸರ್ಕಾರ ನೀಡಿದ್ದ ವಿಶೇಷ ಮೀಸಲಾತಿ ಅನುಷ್ಠಾನವನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ತಡೆ ಹಿಡಿದಿತ್ತು. ಪ್ರಕರಣವನ್ನು ವಿಸ್ಕೃತ ಪೀಠಕ್ಕೆ ವರ್ಗಾಯಿಸಿತ್ತು. ಇದರ ವಿರುದ್ಧ ಕಳೆದ ಸೆಪ್ಟೆಂಬರ್ 21 ರಂದು ಮಹಾರಾಷ್ಟ್ರ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿದೆ.