ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಲವಾರು ಕಾಡು ಪ್ರಾಣಿಗಳು ಸಾವನಪ್ಪಿವೆ ಎಂದು ವಿದ್ಯಾರ್ಥಿಗಳು ಮತ್ತು ವನ್ಯಜೀವಿ ಕಾರ್ಯಕರ್ತರು ತಿಳಿಸಿದ್ದಾರೆ.
ಬೆಂಕಿ ನಂದಿಸುವ ವೇಳೆ ಪಾತ್ರೆ ಮತ್ತು ಅಡುಗೆ ಪದಾರ್ಥಗಳು ಸಿಕ್ಕಿದ್ದು ಅಡುಗೆ ಸಿದ್ಧಪಡಿಸುವ ವೇಳೆ ಬೆಂಕಿ ಹೊತ್ತಿಕೊಂಡಿರಬಹುದು ಅಥವಾ ಇದು ಬೇಟೆಗಾರರ ಕೃತ್ಯ ಇರಬಹುದು ಎಂದು ಹೇಳಲಾಗುತ್ತಿದೆ.
ಮೂರು ಸ್ಥಳಗಳಲ್ಲಿ ಹೊತ್ತಿದ ಬೆಂಕಿಯ ಜ್ವಾಲೆಯನ್ನು ಆರಿಸಲು ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ಎರಡು ಗಂಟೆಗಳ ಕಾಲ ಪ್ರಯತ್ನಪಟ್ಟರು. ಆದರೆ 8-10 ಎಕರೆಯಷ್ಟು ಕಾಡು ಸುಟ್ಟುಹೋಗಿದ್ದು ಪ್ರಾಣಿಗಳು ಬೆಂಕಿಯ ಜ್ವಾಲೆಗೆ ಮೃತಪಟ್ಟಿವೆ.
"ಸುಮಾರು 20 ಭದ್ರತಾ ಸಿಬ್ಬಂದಿ ಮತ್ತು 15-20 ವಿದ್ಯಾರ್ಥಿಗಳು ಅಗ್ನಿ ನಂದಿಸುವ ಸಾಧನಗಳ ಸಹಾಯದಿಂದ ರಾತ್ರಿ 11:15 ರ ಹೊತ್ತಿಗೆ ಬೆಂಕಿ ಆರಿಸಿದರು. ಗಚ್ಚಿಬೌಲಿಯಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ಆರಿಸಲು ಸಹಾಯ ಮಾಡಿದರು" ಎಂದು ವಿಶ್ವವಿದ್ಯಾಲಯದ ವಕ್ತಾರರು ಹೇಳಿದರು.
2,500-3,000 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ವಿಶ್ವವಿದ್ಯಾಲಯ ಕ್ಯಾಂಪಸ್ ಹಲವಾರು ಅಪರೂಪದ ಪಕ್ಷಿ ಮತ್ತು ಕಾಡು ಪ್ರಾಣಿಗಳ ತಾಣವಾಗಿದೆ. ಹೀಗಾಗಿ ಕ್ಯಾಂಪಸ್‌ನ ಅರಣ್ಯ ಪ್ರದೇಶದಲ್ಲಿ ಸಂಭವಿಸುವ ಬೆಂಕಿ ಆರಿಸಲು ಅಗ್ನಿಶಾಮಕ ಸಾಧನಗಳನ್ನು ಕ್ಯಾಂಪಸ್ನಲ್ಲೇ ಇರಿಸುವಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.